Sunday, June 20, 2010

ನನ್ನ ಎಂ.ಎ. ಪದವಿ ಮತ್ತು ಅಪ್ಪನ ಕವನ

ಅಂತೂ ಇಂತೂ ಸೋಂಬೇರಿತನವನ್ನ (ಸ್ವಲ್ಪ ಕಾಲ) ಹೊರಗೋಡಿಸಿ, 'ಪುರುಸೊತ್ತಿಲ್ಲ', 'ಮನಸಿಲ್ಲ' ಅನ್ನೋ ನೆಪಗಳನ್ನೆಲ್ಲ ಬದಿಗೆ ಸರಿಸಿ ನನ್ನ ಬ್ಲಾಗ್ ಅಪ್ಡೇಟ್ ಮಾಡೋ ದೊಡ್ಮನಸ್ಸು ಮಾಡಿದ್ದೀನಿ. ಲಾಸ್ಟ್ ಬ್ಲಾಗ್ ಪೋಸ್ಟ್ ಹಾಕೋ ವೇಳೆಗೆ ನಂಗಿನ್ನೂ ಮದ್ವೆನೇ ಆಗಿರ್ಲಿಲ್ಲ. ಆದ್ರೆ ಈಗ ನಾನು ಶ್ರೀಮತಿ ಮಾತ್ರ ಅಲ್ಲ, ಎಂ.ಎ. (ಮಗುವಿನ ಅಮ್ಮ) ಕೂಡ! :-)

ಮಗುವೊಂದು ಬುವಿಗಿಳಿಯುವಾಗ ತನ್ನ ಜೊತೆಗೆ ಲೋಡುಗಟ್ಟಲೆ ಸಂಭ್ರಮ, ಉಲ್ಲಾಸ, ಜೀವನೋತ್ಸಾಹ ಎಲ್ಲವನ್ನೂ ಹೊತ್ತುಕೊಂಡೇ ಬರುತ್ತದೆ ಅನಿಸುತ್ತೆ. ತಾನತ್ತರೂ, ನಕ್ಕರೂ ನೋಡುವವರಿಗೆ ಸಂತೋಷವನ್ನೇ ಕೊಡುವ ಆ ಪುಟ್ಟ ಜೀವಿ ಮನೆಯವರಿಗೆಲ್ಲ ಜವಾಬ್ದಾರಿಯನ್ನೂ ತನ್ನಿಂತಾನೇ ಹಂಚಿಬಿಡುವ ಪರಿಯೇ ಸೋಜಿಗ.

ಮಗು ಹುಟ್ಟುವ ಮೊದಲು, ಹುಟ್ಟಿದ ನಂತರ ಅಪ್ಪ ಅಮ್ಮ ಅದೇನೇನು ಕನಸು ಕಾಣುತ್ತಾರೆ, ಮಗು ಬೆಳೆಯುವವರೆಗೆ ಅದೆಷ್ಟು ಕಷ್ಟ ಪಡುತ್ತಾರೆ ಎಂಬುದನ್ನೊಮ್ಮೆ ಅರ್ಥಮಾಡಿಕೊಂಡರೆ ಸಾಕು, ಅಪ್ಪ ಅಮ್ಮನನ್ನು ಚಿಲ್ಲರೆ ಕಾರಣಗಳಿಗೋಸ್ಕರ ದೂರುವ ಮಕ್ಕಳಿಗೆ ತಾವೆಂತ ತಪ್ಪು ಮಾಡುತ್ತಿದ್ದೇವೆ ಎನ್ನುವುದು ಅರಿವಾಗಬಹುದು. 'ಅಮ್ಮ ಮನೆಯನ್ನು ಕ್ಲೀನಾಗಿ ಇಡ್ತಿಲ್ಲ, ಅಡಿಗೆ ಬೇಗ ಮುಗಿಸ್ಲಿಲ್ಲ, ಸೂಕ್ಷ್ಮಗಳೇ ಗೊತ್ತಾಗೋಲ್ಲ, ಅತಿಯಾಗಿ ಮಾತಾಡ್ತಾಳೆ' ಅನ್ನೋ ಕ್ಷುಲ್ಲಕ ಕಾರಣಗಳಾಗಲಿ ಅಥವಾ ಅದೆಂಥ ದೊಡ್ಡ ತಪ್ಪೇ ಆಗಿರಲಿ, ಅವಳನುಭವಿಸೋ ಹೆರಿಗೆ ನೋವು, ನಿದ್ದೆ ಇಲ್ಲದ ರಾತ್ರಿಗಳಷ್ಟೇ ಸಾಕು, ಅವಳನ್ನ ಧಾರಾಳವಾಗಿ ಕ್ಷಮಿಸಿಬಿಡೋದಕ್ಕೆ. ಮಗುವಿಗೆ ಸದ್ಬುದ್ಧಿ, ಸನ್ನಡತೆ, ಶಿಸ್ತು ಕಲಿಸುವಲ್ಲಿ ಅಪ್ಪ ತೋರುವ ತಾಳ್ಮೆಯೊಂದೇ ಸಾಕು, ಮಾಡಲೇಬೇಕಾದ ಇಂಪಾರ್ಟೆಂಟ್ ಕೆಲಸವನ್ನ ಅವರು ವಯಸ್ಸಿನ ಕಾರಣದಿಂದಾಗಿ ಮರೆತುಬಿಟ್ಟ ಅಪರಾಧವನ್ನ ಕ್ಷಮಿಸೋಕೆ. ಬೆಳೆದ ಮೇಲಾದರೂ ಅಷ್ಟೆ, ಅಪ್ಪ ಅಮ್ಮ ಮಕ್ಕಳಿಗೆ ಒಂಥರಾ ಒತ್ತಡವನ್ನ ಕಳೆದುಕೊಳ್ಳಲು ಇರೋ ಸ್ಟ್ರೆಸ್ ಬಸ್ಟರ್ಸ್! ಎಲ್ಲೇ ಏನೇ ಲೋಪವಾದರೂ ಅಪ್ಪ ಅಮ್ಮನ ಮೇಲೆ ಕೂಗಾಡಿಬಿಟ್ಟರೆ ಮುಗೀತು, ಟೆನ್ಷನ್ ಮಂಗಮಾಯ! ಅವರೋ, ಸ್ವಲ್ಪ ಹೊತ್ತು ಬೇಜಾರು ಮಾಡಿಕೊಂಡರೂ ಪಾಪ, ಆಮೇಲೆ ತಾವೇ ಮಾತಾಡಿಸುತ್ತಾರೆ, 'ಏನಾಯ್ತು?' ಅಂತ ಕೇಳುತ್ತ. ಅಷ್ಟಕ್ಕೂ ಅವರದೆಷ್ಟೇ ದೊಡ್ಡವರಾದರೂ, ಅಸಡ್ಡೆ ತೋರಿದರೂ ಅಪ್ಪ ಅಮ್ಮನಿಗೆ ಮಕ್ಕಳು ಪ್ರೀತಿಯ ಮಕ್ಕಳೇ. 'ರಸ್ತೆ ದಾಟೋವಾಗ ಜಾಗ್ರತೆ' 'ಯಾಕಿಷ್ಟು ಲೇಟಾಗಿ ಮನೆಗೆ ಬರ್ತೀಯ?', 'ಬೈಕ್ ಸ್ಪೀಡಾಗಿ ಓಡಿಸ್ಬೇಡ', ಅಂತೆಲ್ಲ ಪ್ರತಿನಿತ್ಯವೆಂಬಂತೆ ಅವರು ಚೊರೆ ಮಾಡುವಾಗ 'ಯಾಕಿಷ್ಟು ಕಟ್ಟಿ ಹಾಕೋಕೆ ಪ್ರಯತ್ನ ಮಾಡ್ತಿದ್ದಾರಿವರು? ನಾನೇನು ಚಿಕ್ಕ ಮಗೂನಾ?' ಅನಿಸಿದರೂ ಇವೆಲ್ಲ ಸ್ವಾತಂತ್ರ್ಯ ಹರಣದ ಪ್ರಯತ್ನ ಅಲ್ಲ, ಬದಲಿಗೆ ಅವರಿಗೆ ನಮ್ಮ ಮೇಲಿರೋ ಅಪ್ಪಟ ಕಾಳಜಿಯಿಂದ ಹೇಳ್ತಿರೋದು ಅಂತ ಅರ್ಥ ಆಗೋದು ಸ್ವತಃ ಅಪ್ಪ ಅಮ್ಮ ಆದ್ಮೇಲೇ ಇರಬೇಕು.

ಖಂಡಿತ ಹೌದು, ನನಗೂ ಮಗ ಹುಟ್ಟಿದ್ಮೇಲೆಯೇ ಇವೆಲ್ಲ ಅರ್ಥ ಆಗ್ತಿರೋದು ;-) ಮಗು ಸಂತೋಷ, ಜವಾಬ್ದಾರಿಗಳ ಜೊತೆಗೇ ಒಳ್ಳೆ ಬುದ್ಧಿಯನ್ನೂ ಕೊಡುತ್ತೆ! ಹುಟ್ಟಿದ ಎರಡು ತಿಂಗಳಲ್ಲೇ ನನಗಿಷ್ಟು ಅರಿವು ಮೂಡಿಸಿದ ಪುಟ್ಟ 'ಪ್ರಣವ'ನಿಗೆ ತಿಂಗಳು ತುಂಬಿದ ಸಂದರ್ಭದಲ್ಲಿ ನಮ್ಮಪ್ಪ ಅವನಿಗೆ ಉಡುಗೊರೆಯಾಗಿ ನೀಡಿದ ಕವನವನ್ನ ಇಲ್ಲಿ ಪೋಸ್ಟ್ ಮಾಡ್ತಿದ್ದೀನಿ.

ಪುಟ್ಟ ಕಂದಗೆ ಶುಭ ಹರಕೆ

ನಮ್ಮ ಮನೆಯ ಸೂರಿನಲ್ಲಿ
ಅರಳಿದಂಥ ಪುಷ್ಪವೇ
ದಿನವೂ ಮೊಗದಿ ನಗೆಯ ಚೆಲ್ಲಿ
ವರವ ಕೊಡುವ ದೈವವೇ!

ನಿನ್ನ ಆಟ, ಚೆಲುವ ನೋಟ
ನೋಡಲದು ವಿಚಿತ್ರವೇ
ಮಲಗಿದಲ್ಲೆ ಗಮನ ಸೆಳೆದು
ಕಿಸಿದುಬಿಡುವೆಯಲ್ಲವೆ?

ಕೈಯನೇಕೆ ಹಾರಿಸುತಿಹೆ?
ಜಯದ ಹುರುಪು ನಿನ್ನದೆ?
ಅಳುವೆಯೊಮ್ಮೆ, ನಗುವೆಯೊಮ್ಮೆ
ಮನದ ಒಳಗೆ ಏನಿದೆ?

ಊಟ-ಗೀಟ ಏನೂ ಬೇಡ
ಎದೆಯ ಹಾಲು ಶ್ರೇಷ್ಠವೆ?
ಒಮ್ಮೆ ಅತ್ತುಬಿಟ್ಟರಾಯ್ತು
ಮಮ್ಮು ಸಿಗುವುದಲ್ಲವೆ?

ರಚ್ಚೆ-ಗಿಚ್ಚೆ ಮಾಡಿಕೊಂಡು
ಮಿಣ್ಣಗಿರುವೆಯೇತಕೆ?
ಅಮ್ಮ ನೋಡಿಬಿಡುವಳೆಂದೆ?
ಏಕೆ ನಿನಗೆ ನಾಚಿಕೆ?

ನೀನು ಬಂದು ತಿಂಗಳೊಳಗೆ
ನಮಗೆ ಶಿಸ್ತು ಕಲಿಸಿದೆ
ಮನೆಯ ಒಳಗೂ ಹೊರಗೂ ಏನೋ
ಬೆಳಕು ಮೂಡಿ ಹರಿದಿದೆ!

ಪುಟ್ಟ ಕಂದ, ನಿನಗೆ ನಿತ್ಯ
ನಮ್ಮ ಹರಕೆ ಮಾಲಿಕೆ
ಜೋಜೋ ಲಾಲೀ... ಹಾಡು ಕೇಳು,
ಸುಖವ ತರಲಿ ನಾಳೆಗೆ
- ನ.ಭ.ನೆಂಪು

ಎಲ್ಲರಿಗೂ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು

9 comments:

Unknown said...

ಶುಭಾಶಯಗಳು ...ತು೦ಬಾ ದಿನ ಅಲ್ಲ ವರ್ಷವಾದ ಮೇಲೆ ಬರೆದಿದ್ದಿಯ ..... ಹೀಗೆ ಮು೦ದುವರಿಸು ...ಬ್ಲಾಗ್ ಬರಹವನ್ನು ... ಚೆನ್ನಾಗಿದೆ ಬರಹ ..

sunaath said...

ನಿಮ್ಮ blogನಲ್ಲಿ ಲೇಖನ ಏಕೆ ಬಂದಿಲ್ಲ ಅಂತ ಕಾಯುತ್ತ ಕೂರುವದೇ ಆಗಿತ್ತು. ಈಗ ಅದರ ಕಾರಣವೂ ತಿಳಿದಂತಾಯ್ತು. ಅಲ್ಲ, ಮದುವೆಯ ಸುದ್ದಿಯನ್ನೇ ಹೇಳಿಲ್ಲ ನೀವು;ಮಗುವಾದ ಬಳಿಕ ಒಟ್ಟಿಗೇ ಹೇಳ್ತಾ ಇದ್ದೀರಾ. ಹೋಗಲಿ, ಈ ಮಗುವಿಗಿಂತ
ಹೆಚ್ಚಿನ blog-post ಏನಿದೆ? ನಿಮಗೆ, ನಿಮ್ಮ ಅರ್ಧಾಂಗರಿಗೆ ಹಾಗು ನಿಮ್ಮ ಮಗುವಿಗೆ ನನ್ನ ಶುಭ ಹಾರೈಕೆಗಳು. ನಿಮ್ಮ ತಂದೆ
ಚೆಂದದ ಕವನದ ಉಡುಗೊರೆಯನ್ನು ತಮ್ಮ ಮೊಮ್ಮಗನಿ(ಳಿ)ಗೆ ನೀಡಿದ್ದಾರೆ. ಅವರಿಗೂ ಅಭಿನಂದನೆಗಳು

sritri said...

ಅಜ್ಜನ ಉಡುಗೊರೆ ಪದ್ಯ ಓದಿ ಮನಸ್ಸು ಮುದಗೊಂಡಿತು. ಶುಭಾಶಯಗಳು....ಅಭಿನಂದನೆಗಳು.

Anonymous said...

hmm. antoo baruke mans maadriyala.. shubha haariakegaLu

Shubhada said...

ಎಲ್ಲರಿಗೂ ಪ್ರೀತಿಯಿಂದ ಧನ್ಯವಾದಗಳು :-)

Jagali bhaagavata said...

ಖಂಡಿತ ಹೌದು, ನನಗೂ ಮಗ ಹುಟ್ಟಿದ್ಮೇಲೆಯೇ ಇವೆಲ್ಲ ಅರ್ಥ ಆಗ್ತಿರೋದು ;-)...
....ayyabba, antoo subbige olle budhdhi bant :)

Shubhada said...

@ಜಗಲಿ ಭಾಗವತ
ಹೆ ಹೆ ಹೌದ್. ನಂಗಂತೂ ಬಂತ್. ಭಾಗ್ವತ್ರಿಗ್ ಅದಿನ್ಯಾವಾಗ ಬತ್ತೋ? :-D ಅಂದ್ ಹಾಂಗೆ ತಮ್ಮ ಬ್ಲಾಗ್ ಅಪ್ಡೇಟ್ ಆಪುದ್ ಏಗ್ಳಿಗೆ? ಕಾದ್ ಕಾದ್ ಸಾಕಾಯ್ತಲೆ?

Roopa said...

ನಿಮ್ಮ ತಂದೆಯವರ ಉಡುಗೊರೆ ಪದ್ಯ ಸೊಗಸಾಗಿದೆ. ಅಭಿನಂದನೆಗಳು!!

Prateeksha said...

Heart touching :) Eag nang tension start agide ;) ur n mine thoughts are very similar. Just few days back same thing was coming in my min. Nenapu galu haari bandu Guilt kaadutide :|