Thursday, September 9, 2010

ವಿಚಿತ್ರ ಬಂಧಗಳು

ಆವತ್ತು ಥರ್ಡ್ ಪಿರಿಯಡ್ಗೆ ಒಂದು ಟೆಸ್ಟ್ ಇತ್ತು. ಪುಸ್ತಕ ಬಿಡಿಸಿಯೂ ನೋಡಿರಲಿಲ್ಲ. ಅದರ ಇಂಟರ್ನಲ್ ಮಾರ್ಕ್ಸ್ ಬೇರೆ ಚೆನ್ನಾಗಿರಲಿಲ್ಲ. ಹಾಗಾಗಿ ಬರೆಯಲೇಬೇಕಿತ್ತು ಟೆಸ್ಟ್. ಸರಿ, ಇನ್ನೇನು ಮಾಡೋದು, ಆರಾಮಾಗಿ ಫರ್ಸ್ಟ್ ಎರಡು ಅವರ್ ಬಂಕ್ ಹೊಡೆದು ಓದಿಕೊಳ್ಳುವ ಪ್ಲಾನ್ ಹಾಕಿ ಲೈಬ್ರರಿಗೆ ಹೋದೆ. ಹಾಗೂ ಹೀಗೂ ಪುಸ್ತಕ ಬಿಡಿಸಿ ಓದಿಕೊಳ್ಳೋಕೆ ಶುರು ಮಾಡಿದರೆ ಏನೇನೂ ಅರ್ಥ ಆಗದೆ ಎಲ್ಲಾ ಬೌನ್ಸ್ ಆಗೋಕೆ ಪ್ರಾರಂಭ ಆಯ್ತು. ಅಷ್ಟರಲ್ಲೇ ಕ್ಲಾಸಲ್ಲಿ ಕೂತಿದ್ದ ಗೆಳತಿಯಿಂದ ಮೆಸೇಜ್ ಬೇರೆ ಬಂತು, ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಮೇಡಂ ಬಂಕ್ ಮಾಡಿದವರಿಗೆಲ್ಲ ಹಿಗ್ಗಾಮುಗ್ಗಾ ಉಗಿಯುತ್ತಿದ್ದಾರೆ. ನೀನು ಈಗ ಕ್ಲಾಸಿಗೆ ಬರೋದಾದ್ರೆ ಬಂದುಬಿಡು ಅಂತ. ಸಿಕ್ಕಾಪಟ್ಟೆ ಬೇಜಾರಾಯ್ತು ಯಾಕೋ. ಬೈಸಿಕೊಳ್ಳುವುದು ಹೊಸತೇನಲ್ಲವಾದರೂ, ಒಂದು ಕಡೆ ಓದಿದ್ದೂ ತಲೆಗೆ ಹೋಗ್ತಾ ಇಲ್ಲ, ಇನ್ನೊಂದು ಕಡೆ ಸುಮ್ಮಸುಮ್ಮನೆ ಬೈಸಿಕೊಳ್ಳುತ್ತಿದ್ದೀನಲ್ಲ ಅಂತ ದಯನೀಯ ಸೋಲಿನ ಭಾವದಿಂದ ತಲೆಮೇಲೆ ಕೈ ಹೊತ್ತು ಕೂತಿದ್ದೆ ಪೇಲವ ಮುಖ ಮಾಡಿಕೊಂಡು. ಲೈಬ್ರರೀಲಿ ಕಸ ಗುಡಿಸುತ್ತಿದ್ದ ಹೆಂಗಸು ನನ್ನ ಹತ್ತಿರವೇ ಗುಡಿಸುತ್ತಿದ್ದರು. ನನ್ನ ಮುಖ ಕಂಡು ಏನನಿಸಿತೋ, ‘ಯಾಕೆ? ಕಷ್ಟವಾಗ್ತಿದೆಯಾ ಮಗಾ? ನೀವೆಲ್ಲ ಚೆನ್ನಾಗಿ ಓದಬೇಕು..’ ಅಂತ ಸಾಂತ್ವನದ ಮಾತಾಡೋಕೆ ಶುರು ಮಾಡಿದರು. ನಾನೇನೂ ಹೇಳದೆ ಸುಮ್ಮನೆ ಪಿಳಿಪಿಳಿ ಅವರ ಮುಖ ನೋಡಿದೆ. ‘ನನ್ನ ಮಗನೂ ಹೀಗೆ. ಓದ್ತಾ ಇರ್ಲಿಲ್ಲ. ನಾನು ಸ್ವಾಮಿಗಳ ಹತ್ತಿರ ಹೋಗಿ ಬೇಡಿಕೊಂಡೆ. ಅವರು ನಾಲ್ಕೇ ಶಬ್ದದ ಒಂದು ಮಂತ್ರ ಹೇಳಿಕೊಟ್ರು. ಇದನ್ನ ಯಾವಾಗ್ಲೂ ಹೇಳ್ತಿದ್ರೆ ಒಳ್ಳೇದಾಗ್ತದೆ ಅಂದ್ರು. ನನ್ನ ಮಗ ಈ ಮಂತ್ರವನ್ನ ದಿನಾ ಹೇಳ್ತಾನೆ. ಈಗ ಚೆಂದ ಓದ್ತಾನೆ. ನಿಂಗೂ ಆ ಮಂತ್ರ ಹೇಳಿಕೊಡ್ತೇನೆ ಮಗಾ. ದೇವ್ರು ಕೈ ಬಿಡುದಿಲ್ಲ’ ಎಂದೆಲ್ಲ ಬಡಬಡಿಸಿದರು. ಇದರಲ್ಲೆಲ್ಲ ನನಗೆ ಅಂಥಾ ನಂಬಿಕೆ ಇಲ್ಲವಾದರೂ ಅವರ ಅಂತಃಕರಣಕ್ಕೋ, ಕಾಳಜಿಗೋ ಪರವಶಳಾದಂತೆ ಅವರು ಹೇಳಿದ ಹಾಗೇ ಅಲ್ಲೆಲ್ಲೋ ಬಿದ್ದಿದ್ದ ಪೇಪರ್ ಚೂರನ್ನೆತ್ತಿಕೊಂಡು ಹೇಳಿದ್ದೆಲ್ಲ ಬರೆದುಕೊಂಡೆ. ಪುಟ್ಟ ಮಗುವಿಗೆ ಮಾಡುವಂತೆ ಅವರು ನನ್ನ ಕೈ ಹಿಡಿದು ಶಬ್ದಗಳ ಮೇಲೆ ಓಡಿಸುತ್ತಾ ಮಂತ್ರ ಹೇಳಿಕೊಟ್ಟರು. ನನ್ನ ಸ್ವಾಧೀನವನ್ನೇ ಕಳೆದುಕೊಂಡವಳಂತೆ ನಾನು ಅವರು ಹೇಳಿದಂತೆ ಕೇಳುತ್ತಾ, ಮಾಡುತ್ತಾ ಹೋದೆ. ತಲೆಭಾರ ಇಳಿದದ್ದಂತೂ ಸುಳ್ಳಲ್ಲ! ಆಮೇಲೆ ಅವರನ್ನು ಮಾತಾಡಿಸಬೇಕೆಂಬ ಜ್ಞಾನೋದಯವಾದಂತಾಗಿ ಅವರ ಹೆಸರು, ಊರು ಇತ್ಯಾದಿ ಎಲ್ಲ ಕೇಳಲಾರಂಭಿಸಿದೆ. ಕಾಲೇಜು ಸೇರಿದಾಗಿಂದ ಅವರನ್ನು ನೋಡುತ್ತಿದ್ದೆನಾದರೂ ಯಾವತ್ತೂ ಮಾತಾಡಿಸುವ ಗೋಜಿಗೇ ಹೋಗಿರಲಿಲ್ಲ. ಇವತ್ತು ನನ್ನ ಗುರುತು ಪರಿಚಯವೇ ಇಲ್ಲದಿದ್ದರೂ ಪ್ರೀತಿ ತೋರಿದ ಅವರ ಬಗ್ಗೆ ಮನತುಂಬಿ ಬಂದಿತ್ತು. ಮುನ್ನಾಭಾಯಿ ಸಿನೇಮಾದ ಆಸ್ಪತ್ರೆಯ ಕ್ಲೀನರ್ ತಾತಪ್ಪ, ಮುನ್ನಾಭಾಯಿಯ ಜಾದೂ ಕಿ ಝಪ್ಪಿ ಎಲ್ಲ ಮನಃಪಟಲದಲ್ಲಿ ಹಾದುಹೋದವು. ತನ್ನ ವಿವರಗಳನ್ನೆಲ್ಲ ಹೇಳಿದ ಸುಮನಕ್ಕ ತನ್ನ ಕುಟುಂಬ ತೊಂದರೆಗಳು, ಆರೋಗ್ಯ ಸರಿ ಇಲ್ಲದಿದ್ದರೂ ರಜೆ ಸಿಗದಿರುವುದು, ಸರಿಯಾಗಿ ಕೆಲಸ ಮಾಡಿದ್ದರೂ ಕೆಲಸವೇ ಮಾಡಿಲ್ಲ ಅಂತೆಲ್ಲ ಬೈಸಿಕೊಳ್ಳುವುದು ಇವುಗಳ ಬಗ್ಗೆಲ್ಲ ಹೇಳಿ ಮನಸ್ಸು ಹಗುರ ಮಾಡಿಕೊಂಡರು. ಓದಿ ಆಗಿಲ್ಲ ಅನ್ನುವ ನೆನಪೇ ಹಾರಿಹೋಗಿತ್ತು ನನಗೆ! ಆಮೇಲೆ ಅವರೇ ‘ಓದಿಕೋ ಮಗಾ. ನಿನ್ನನ್ನ ತುಂಬಾ ದಿನದಿಂದ ನೋಡುತ್ತಿದ್ದೆ. ನಿನ್ನನ್ನ ನೋಡಿದ್ರೆ ನಂಗೇನೋ ಖುಶಿ. ಬೇಜಾರಲ್ಲಿದ್ಯಲ್ಲ ಇವತ್ತು. ತಡೀಲಿಕ್ಕಾಗ್ಲಿಲ್ಲ. ಅದ್ಕೇ ಮಾತಾಡಿಸಿದೆ. ಚೆನ್ನಾಗಿರು ಮಗಾ’ ಎನ್ನುತ್ತ ತಲೆ ಮೇಲೆ ಕೈಯಿಟ್ಟು ಹರಸಿ ಹೋದರು. ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಮನಸ್ಸು ಎಷ್ಟು ಹಗುರವಾಯ್ತು ಅಂದರೆ, ಒಂದೇ ಗಂಟೆಯಲ್ಲಿ ಎಲ್ಲಾ ಚೆನ್ನಾಗಿ ಓದಿಕೊಂಡು ಟೆಸ್ಟ್ ಕೂಡಾ ಚೆನ್ನಾಗಿ ಬರೆದೆ ಆವತ್ತು! ಅವರ್ಯಾರು, ಅವರಿಗೆ ಅಷ್ಟು ಸಾವಿರ ಜನ ವಿದ್ಯಾರ್ಥಿಗಳಲ್ಲಿ ನಾನೇ ಏಕೆ ಅಷ್ಟು ಇಷ್ಟವಾದೆ ಎನ್ನುವ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರ ಸಿಕ್ಕಿಲ್ಲ. ಮುದ್ದೆ ಮುದ್ದೆಯಾದ ಪೇಪರಲ್ಲಿ ಬರೆದುಕೊಂಡಿದ್ದ ಆ ಮಂತ್ರವನ್ನು ಇನ್ನೂ ಜೋಪಾನವಾಗಿ ಎತ್ತಿಟ್ಟುಕೊಂಡಿದ್ದೇನೆ! ನೋಡಿದಾಗೆಲ್ಲ ಅದೇನೋ ಸುಖಾನುಭೂತಿ.

ಈ ಬೆಂಗಳೂರಿಗೆ ವಲಸೆ ಬಂದ ಮೇಲೆ ನನ್ನ ಡ್ರೆಸ್ಗಳನ್ನ ಹೊಲಿಸೋದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇಲ್ಲೇನೂ ದರ್ಜಿಗಳ ಕೊರತೆಯಿಲ್ಲ ಬಿಡಿ. ಗಲ್ಲಿ ಗಲ್ಲಿಗಳಲ್ಲಿ ರಾಶಿ ತುಂಬಿಕೊಂಡಿರುವ ಮತ್ತೆಲ್ಲ ಅಂಗಡಿಗಳೊಂದಿಗೆ ಟೈಲರ್ಸ್ ಶಾಪ್ಗಳೂ ಹೇರಳವಾಗಿ ಕಾಣಸಿಗುತ್ತವೆ. ನಮ್ಮ ಮನೆ ಹತ್ತಿರವೇ ಕನಿಷ್ಟ ೪-೫ ಜನ ಆದರೂ ಲೇಡೀಸ್ ಟೈಲರ್ಸ್ಗಳಿದ್ದಾರೆ. ಸಮಸ್ಯೆ ಅದಲ್ಲ. ನಾನು ಖಾಯಂ ಬಟ್ಟೆ ಹೊಲಿಸುವ ನನ್ನೂರಿನ ದರ್ಜಿ ಇಲ್ಲಿಲ್ಲದಿರುವುದೇ ದೊಡ್ಡ ಸಮಸ್ಯೆ! ಊರಲ್ಲಿಯೂ ಹಲವಾರು ಜನ ದರ್ಜಿಗಳಿದ್ದರೂ, ಅವರಲ್ಲಿ ಕೆಲವರು ಇವನಿಗಿಂತ ಚೆನ್ನಾಗಿ, ಕಡಿಮೆ ದರದಲ್ಲಿ ಹೊಲಿದು ಕೊಡುವವರಾದರೂ ನನ್ನ ಮಟ್ಟಿಗೆ ಇವನೊಬ್ಬನೇ ಟೈಲರ್. ಹಾಗಂತ ಅವ ಮಹಾನ್ ಫ್ಯಾಶನ್ ಡಿಸೈನರ್ ಏನೂ ಅಲ್ಲ. ಮಾಮೂಲಿ ಎಲ್ಲ ಲೇಡೀಸ್ ಟೈಲರ್ಸ್ಗಳಂತೆ ಬಟ್ಟೆಗಳನ್ನು ನಾವು ಹೇಳಿದ ರೀತಿಯಲ್ಲಿ ಹೊಲಿದು ಕೊಡುತ್ತಾನೆ ಅಷ್ಟೆ. ಅವನ ಅಂಗಡಿಯಲ್ಲಿ ಥಳ ಥಳ ಹೊಳೆಯುವ ಟೈಲ್ಸ್ಗಳೋ, ಫಳ ಫಳ ಮಿಂಚುವ ಗೋಡೆಗಳೋ, ಕಣ್ಸೆಳೆಯುವ ಭಿತ್ತಿ ಚಿತ್ರಗಳೋ ಒಂದೂ ಇಲ್ಲ. ಅದೊಂದು ಯಕಶ್ಚಿತ್ ಅಂಗಡಿ. ಟ್ರಾಯಲ್ ರೂಮ್, ಮಣ್ಣು-ಮಸಿ ಅಂತೆಲ್ಲ ದೊಡ್ಡ ದೊಡ್ಡ ಬೋಟಿಕ್ಗಳಲ್ಲಿರುವ ಆಕರ್ಷಣೆಗಳೊಂದೂ ಅಲ್ಲಿಲ್ಲ. ರೇಟ್ ಕೂಡ ಅಂಥಾ ಕಮ್ಮಿ ಅಂತೇನಿಲ್ಲ. ಅಥವಾ ನಾನು ಅವನ ಅಂಗಡಿಯ ಖಾಯಂ ಗಿರಾಕಿ ಅಂತ ಅವನೇನು ನಂಗೋಸ್ಕರ ನಯಾಪೈಸೆಯೂ ಕಡಿಮೆ ಮಾಡೋದಿಲ್ಲ ಪುಣ್ಯಾತ್ಮ! ಹೋಗಲಿ ಅಂದರೆ, ಬಟ್ಟೆ ತೀರಾ ಬೇಗ ಹೊಲಿದು ಕೊಡೋದೂ ಇಲ್ಲ ಅವನು. ಸೀಸನ್ ಟೈಮಲ್ಲಂತೂ ಒಂದು ಡ್ರೆಸ್ ಹೊಲಿದು ಕೊಡಲಿಕ್ಕೂ ಅವನಿಗೆ ಮಿನಿಮಮ್ ಮೂರು ವಾರ ಬೇಕು. ಸ್ವಲ್ಪ ಬೇಗ ಕೊಡಲಿಕ್ಕೆ ಆಗುತ್ತಾ ಅಂತ ನಾನು ಹೆದರಿ ಹೆದರಿ ಕೇಳಿದರೆ ಕಣ್ಣೆಲ್ಲ ಕೆಂಪು ಮಾಡಿಕೊಂಡು ಬಯ್ಯೋದಕ್ಕೂ ರೆಡಿ ಆಸಾಮಿ! ಇಷ್ಟೆಲ್ಲ ಆದರೂ ನನ್ನ ಬಟ್ಟೆಗಳನ್ನ ಹೊಲಿಯುವುದಕ್ಕೆ ಅವನೇ ಬೇಕು ನನಗೆ. ಅವನಲ್ಲಿಗೇ ಯಾಕೆ ಹೋಗಬೇಕು, ಬೇರೆ ಕಡೆ ಯಾಕೆ ಹೋಗಬಾರದು ಅನ್ನುವುದಕ್ಕೆ ನನ್ನ ಬಳಿ ಯಾವ ಸೂಕ್ತ ಕಾರಣಗಳಿಲ್ಲದಿದ್ದರೂ ಅವನ ಅಂಗಡಿಯ ಬಗ್ಗೆ ನನ್ನ ಗೆಳತಿಯರಲ್ಲೆಲ್ಲಾ ಶಿಫಾರಸು ಮಾಡುತ್ತೇನೆ. ಅವನು ಹೊಲಿದದ್ದು ಎಲ್ಲೋ ಸ್ವಲ್ಪ ಎಡವಟ್ಟಾಗಿದೆ ಅಂತ ಮನಸಿನ ಮೂಲೆಯಲ್ಲೆಲ್ಲೋ ನನಗೇ ಅನಿಸಿದರೂ ‘ಹೇ ಇಲ್ಲ ತುಂಬ ಚೆನ್ನಾಗಿದೆ. ಇದು ಹೊಸ ಫ್ಯಾಷನ್ ಅಲ್ವಾ?’ ಅಂತ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತ ಅದೇ ಅಭಿಪ್ರಾಯವನ್ನು ನನ್ನ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದವರ ಮೇಲೂ ಹೇರಿ ಬಾಯಿ ಮುಚ್ಚಿಸಿ ಬಿಡುತ್ತೇನೆ. ಅವನ ಅಂಗಡಿಗೆ ಹೋದರೆ ಕನಿಷ್ಟ ಪಕ್ಷ ಒಂದು ಸೌಜನ್ಯದ ನಗೆಯನ್ನಾದರೂ ಬೀರದ ಅವನನ್ನ ನಾನು ಈ ಪರಿ ಹಚ್ಚಿಕೊಂಡಿರುವುದನ್ನ ಎಣಿಸಿಕೊಂಡರೆ ನನಗೇ ಆಶ್ಚರ್ಯ ಅನಿಸುತ್ತೆ.

ಇವರಿಬ್ಬರೇ ಅಂತಲ್ಲ. ಬೆಂಗಳೂರಿಗೆ ಬಂದು ಮಿಸ್ ಮಾಡಿಕೊಳ್ಳುತ್ತಿರೋದು ಇಂಥಾ ಹಲವರನ್ನ. ಅವರೇನೂ ನನ್ನ ಸಹಪಾಠಿಗಳಲ್ಲ, ಒಡನಾಡಿಗಳಲ್ಲ, ಸಂಬಂಧಿಗಳಲ್ಲ. ಅಸಲಿಗೆ ನನ್ನ ಅವರೊಂದಿಗಿನ ಕೆಲಸದ ಹೊರತಾಗಿ ನನಗೆ ಅವರ ಹೆಸರನ್ನೂ ಒಳಗೊಂಡಂತೆ ಅವರ ಬಗೆಗಿನ ಯಾವ ವೈಯಕ್ತಿಕ ವಿವರಗಳೂ ಗೊತ್ತಿಲ್ಲ. ಹೀಗಿದ್ದೂ ಅವರೊಂದಿಗೆ ಅದೆಂಥಾ ವಿಚಿತ್ರ ಬಂಧ ಏರ್ಪಟ್ಟು ಬಿಟ್ಟಿದೆ ಅಂದರೆ ಅವರನ್ನ ಆಗಾಗ ನೆನಪು ಮಾಡಿಕೊಳ್ಳುವಷ್ಟು. ನನ್ನ ಪ್ರೈಮರಿ ಶಾಲೆಯ ಪಕ್ಕ ಚಾಕ್ಲೇಟ್, ಬೋಟಿ, ನಾಕಾಣೆಯ ಹುಳ ಹಿಡಿದ ಉಪ್ಪಿನಕಾಯಿ ಪ್ಯಾಕೆಟ್ ಇತ್ಯಾದಿಗಳನ್ನು ಮಾರುತ್ತಿದ್ದ, ಸಾಯಿಬಾಬಾ ಥರ ಕೂದಲಿದ್ದ ವಾಸಣ್ಣ, ಪದೇ ಪದೇ ಕಿತ್ತೋಗುವ ನನ್ನ ಚಪ್ಪಲಿಗಳನ್ನು ಹೊಲಿಸುತ್ತಿದ್ದ ಅಂಗಡಿಯಾತ, ಕಾಲೇಜಿನ ಫಿಸಿಕ್ಸ್ ಲ್ಯಾಬಲ್ಲಿ ಸದಾ ನನ್ನ ಸಹಾಯಕ್ಕೆ ಬರುತ್ತಿದ್ದ ಲ್ಯಾಬ್ ಅಟೆಂಡರ್, ಹೆಚ್ಚು ಮಾತೇ ಆಡದೆ ಒಟ್ಟಿಗೆ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಕುಳ್ಳ-ಕುಳ್ಳಿ ದಂಪತಿ ಜೋಡಿ, ಫ್ಯಾನ್ಸಿ ಸ್ಟೋರಿನ ಸಿಡುಕು ಮೂತಿಯ ಹುಡುಗಿ, ನನ್ನೂರಿನ ಎಸಿ ಬಸ್ಸಿನ (ಎಸಿ ಅಂದ್ರೆ ವಜ್ರ ಬಸ್ ಅಲ್ಲ. ಈ ಬಸ್ಸಿನ ಕಿಟಕಿಗಳಿಗೆ ಗ್ಲಾಸ್ಗಳೇ ಇರುವುದಿಲ್ಲ. ಚೆನ್ನಾಗಿ ಗಾಳಿಯಾಡಿ ತಂಪಾಗುತ್ತದಾದ್ದರಿಂದ ಎಸಿ ಬಸ್ ಎಂಬ ಅಡ್ಡ ಹೆಸರು. ಈ ಬಸ್ಸಲ್ಲಿ ಹೋಗೋ ಸುಖವೇ ಬೇರೆ. ಆದರೆ ಮಳೆಗಾಲದಲ್ಲಿ ಹೊರಗಿನ ನೀರು ಒಳಬರದಂತೆ ಗಬ್ಬು ನಾತ ಬೀರುವ ಕರ್ಟನ್ ಏರಿಸಿಕೊಂಡಿರುತ್ತವೆ) ಸದಾ ನಗುತ್ತಿರುವ ಚೆಲುವ ಕಂಡಕ್ಟರ್, ಪರಿಚಯದ ನಗು ಬೀರುವ ಆಟೋ ಡ್ರೈವರ್, ಅಪರಿಮಿತ ಜೀವನೋತ್ಸಾಹ ತುಂಬಿಕೊಂಡು ಲಿಫ್ಟ್ಗೆ ಬಂದ ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುವ ಕಾಲೇಜಿನ ಲಿಫ್ಟ್ಮ್ಯಾನ್ ಇವರೆಲ್ಲ ನನ್ನನ್ನ ಕಾರಣವಿಲ್ಲದೆ ಕಾಡುತ್ತಾರೆ.

ನನ್ನಮ್ಮನ ಪ್ರಕಾರ ಅವಳ ತವರೂರಲ್ಲಿರುವ ಅಕ್ಕಸಾಲಿಯನ್ನು ಬಿಟ್ಟು ಉಳಿದೆಲ್ಲರೂ ಚಿನ್ನದ ತೂಕದಲ್ಲಿ ಮೋಸ ಮಾಡುವವರು. ಇವನಾದರೆ ಅಗತ್ಯವಿದ್ದಷ್ಟು ಮಾತ್ರ ಬೇರೆ ಲೋಹ ಮಿಶ್ರ ಮಾಡುತ್ತಾನೆ. ಕೈಯಲ್ಲೇ ಮಾಡುವ ಆಭರಣಗಳಾದ್ದರಿಂದ ಡಿಸೈನ್ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಅದೆಲ್ಲ ಅಪ್ಪಟ ಚಿನ್ನ ಅವಳ ಪಾಲಿಗೆ. ಅವಳ ಮದುವೆ ಸಮಯದಲ್ಲಿ ಅವನಿಂದ ಮಾಡಿಸಿಕೊಂಡ ಬಳೆಗಳನ್ನು ಅಳಿಸಿ ಬೇರೆ ಹೊಸ ಫ್ಯಾಷನ್ದು ಬೇರೆ ಕಡೆ ಮಾಡಿಸಿಕೋ ಅಂತ ನಾವೇನಾದ್ರೂ ಹೇಳಿದ್ರೆ ‘ಮಾಧವನ ಅಂಗಡಿಯಲ್ಲಿ ಮಾಡಿಸಿದ್ದಿದು. ಬೇರೆ ಕಡೆ ಮಾಡಿಸೋಕೆ ಕೊಟ್ರೆ ಅವ್ರೇ ಒಳ್ಳೆ ಚಿನ್ನ ಎಲ್ಲ ಇಟ್ಟುಕೊಂಡು ಬಿಡ್ತಾರೆ. ನಾನು ಮಾಡಿಸುದಾದ್ರೂ ಅವನತ್ರವೇ ಮಾಡಿಸುತ್ತೇನೆ’ ಅಂತೆಲ್ಲ ಕತೆ ಹೊಡೆಯುತ್ತಾಳೆ.

ಪ್ರಾಯಶಃ ನಾವು ಹೆಣ್ಣುಮಕ್ಕಳೇ ಹೀಗೆ. ಕಾರಣವಿಲ್ಲದೆ ನಮ್ಮ ಮನಸ್ಸನ್ನು ಯಾರೋ ತಟ್ಟಿಬಿಡುತ್ತಾರೆ. ಸುಖಾಸುಮ್ಮನೆ ಕಾಡುತ್ತಾರೆ. ಯಾವುದೋ ಬಳೆ ಅಂಗಡಿಯಾತನನ್ನ ನೆಚ್ಚಿಕೊಂಡು ಬಿಟ್ಟರೆ ಮತ್ತೆ ಆ ಅಂಗಡಿ ಬಿಟ್ಟು ಬೇರೆಯದನ್ನು ಸುಮ್ಮನೆ ಕುತೂಹಲಕ್ಕಾದರೂ ಹೊಕ್ಕಬೇಕು ಅನಿಸುವುದಿಲ್ಲ. ಅಪ್ಪಿತಪ್ಪಿ ಹೋದರೂ ಎಲ್ಲವನ್ನೂ ಹೋಲಿಸುತ್ತಾ, ‘ಇಲ್ಲ, ಇದೇ ರೇಟಿಗೆ ಇದಕ್ಕಿಂತ ಚೆನ್ನಾಗಿರೋ ಬಳೆ ಅಲ್ಲಿ ಸಿಗುತ್ತೆ.’ ‘ಅಲ್ಲಿ ಸಿಗೋ ಕ್ವಾಲಿಟಿ ಇಲ್ಲೆಲ್ಲಿ ಸಿಕ್ಕೀತು?’ ಅಂತೆಲ್ಲ ನಮಗೆ ನಾವೇ ಕಾರಣಗಳನ್ನು ಸೃಷ್ಟಿಸಿಕೊಂಡು ಇಡೀ ಭೂಲೋಕದಲ್ಲೇ ಅಂಥದೊಂದು ಶ್ರೇಷ್ಠ ಅಂಗಡಿ ಬೇರೆಲ್ಲೂ ಇಲ್ಲ ಎನ್ನುವ ಭ್ರಮೆಯಲ್ಲೇ ಬದುಕುತ್ತೇವೆ. ನನ್ನ ಗೆಳತಿಯೊಬ್ಬಳು ಒಳ್ಳೆಯ ಗುಣಮಟ್ಟದ ಬುಕ್ಗಳು ಎಂಬ ಕಾರಣಕ್ಕೆ ನೋಟ್ಬುಕ್ಗಳನ್ನ ತೆಗೆದುಕೊಳ್ಳಲಿಕ್ಕೆಂದೇ ೩೫ ಕಿ.ಮೀ. ದೂರ ಜಾಸ್ತಿ ಕ್ರಮಿಸುತ್ತಿದ್ದಾಗ ಅವಳನ್ನ ಇನ್ನಿಲ್ಲವೆಂಬಂತೆ ಆಡಿಕೊಂಡು ನಕ್ಕಿದ್ದೆವು. ಈಗ ನಾನು ಡ್ರೆಸ್ ಹೊಲಿಸಲಿಕ್ಕೆಂದೇ ೪೫೦ ಕಿ.ಮೀ.ಗಳಷ್ಟು ದೂರದ ನನ್ನೂರಿಗೆ ಬಟ್ಟೆಗಳನ್ನು ಇಲ್ಲಿಂದ ಹೊತ್ತೊಯ್ಯುವಾಗ ಭ್ರಮೆ ಅನಿಸುವುದೇ ಇಲ್ಲ!!

ಊರಿನ ನೆಚ್ಚಿನ ವ್ಯಕ್ತಿಗಳು ಇಲ್ಲಿಲ್ಲ ಎಂಬ ತಳಮಳ ಇದ್ದರೂ, ಈ ಐದಾರು ತಿಂಗಳಲ್ಲಿ ಬೆಂಗಳೂರಲ್ಲೂ ನೆಚ್ಚಿನ ವ್ಯಕ್ತಿಗಳು ಹುಟ್ಟಿಕೊಂಡು ಬಿಟ್ಟಿದ್ದಾರೆ. ಪ್ರತೀ ಮಂಗಳವಾರ ಬರುವ ಇಸ್ತ್ರಿಯ ಅಜ್ಜ ಒಂದು ಮಂಗಳವಾರ ಬರದಿದ್ದರೆ ಸಾಕು, ಮನಸ್ಸು ಚಡಪಡಿಸಿಬಿಡುತ್ತದೆ. ಎಡೆಬಿಡದೆ ಸಿಗರೇಟು ಸೇದುವ ಅವನಿಗೆ ಏನಾದರೂ ಆಯಿತೇನೋ, ಹುಷಾರಿಲ್ಲವೇನೋ ಅಂತ ಸಣ್ಣ ಗಾಬರಿಯೂ ಹುಟ್ಟಿಬಿಡುತ್ತದೆ. ಮಠದ ಬಳಿ ಹೂಮಾರುತ್ತಿರುವ, ಬಾಯ್ತುಂಬ ಮಾತನಾಡುವ ಹೆಂಗಸಿನ ಬಳಿಯಲ್ಲದೆ ಬೇರೆ ಯಾರ ಬಳಿಯಲ್ಲೂ ಸುಮ್ಮನಾದರೂ ಹೂ ಕೊಳ್ಳಬೇಕು ಅನಿಸುವುದಿಲ್ಲ. ‘ನಮ್ಮ ಏರಿಯಾದಲ್ಲಿ ಅರ್ಧ ಮೊಳ ಹೂಗೆ ೧೦ ರೂ. ಏನ್ ಕೇಳ್ತೀರಿ?’ ಅಂತ ಯಾರಾದ್ರೂ ಗೊಣಗುತ್ತಿದ್ದರೆ ‘ನಮ್ಮ ಕಡೆ ಹಾಗಿಲ್ಲಪ್ಪ. ಒಂದೊಳ್ಳೆ ಹೆಂಗ್ಸಿದೆ. ಸೀಸನ್ ಟೈಮಲ್ಲಿ ಸ್ವಲ್ಪ ಜಾಸ್ತಿ ಅನ್ನೋದು ಬಿಟ್ರೆ ಬೇರೆ ಟೈಮಲ್ಲಿ ಸಂಪಿಗೆ ಹೂ ಫ್ರೀ ಕೊಡ್ತಾಳೆ ಅವ್ಳು’ ಎಂಬ ಶಿಫಾರಸು ಬೇರೆ ಮಾಡ್ತೇನೆ!

ಗುರುತು ಪರಿಚಯವೇ ಇರದ ನನ್ನ ಇವರೆಲ್ಲರ ನಡುವಿನ ಆ ವಿಚಿತ್ರ ಬಂಧ ಯಾವುದಿರಬಹುದು ಎಂಬ ಗೊಂದಲಕ್ಕೆ ಬೀಳುತ್ತೇನೆ ಒಮ್ಮೊಮ್ಮೆ. ತೀರ ಹತ್ತಿರದ ಸಂಬಂಧಿಗಳನ್ನೇ ಕೆಲವೊಮ್ಮೆ ನಂಬಬೇಕು, ನೆಚ್ಚಿಕೊಳ್ಳಬೇಕು ಅನಿಸುವುದಿಲ್ಲ. ವರ್ಷಾನುಗಟ್ಟಲೆ ಪರಿಚಯ ಇದ್ದರೂ ಸುಮಧುರ ಬಾಂಧವ್ಯ ಬೆಳೆಯುವುದಿಲ್ಲ. ಅಂಥಾದ್ದರಲ್ಲಿ ಕೇವಲ ವ್ಯಾವಹಾರಿಕ ಸಂಬಂಧ ಮಾತ್ರ ಇರುವವರು ಒಂದೇ ಸಲದ ಪರಿಚಯ ಮಾತ್ರಕ್ಕೆ ನಮ್ಮ ನಂಬಿಕಸ್ಥರೆನಿಸಿಕೊಂಡು ಬಿಡುತ್ತಾರಲ್ಲ, ಸರಿಯಾಗಿ ಅವರ ವೈಯಕ್ತಿಕ ವಿವರಗಳನ್ನೂ ತಿಳಿದುಕೊಳ್ಳದೆ, ಎಲ್ಲ ಸದ್ಗುಣಗಳನ್ನು ಅವರಿಗೆ ನಾವೇ ಆರೋಪಿಸಿ ನಮ್ಮ ಆಪ್ತರೆನ್ನುವಂತೆ ಬಿಂಬಿಸಿಕೊಂಡು ಬಿಡುತ್ತೀವಲ್ಲ! ನನ್ನಮ್ಮ ಹೇಳುವ ಹಾಗೆ ಪೂರ್ವ ಜನ್ಮದಲ್ಲಿ ಅವರಿಗೂ ನಮಗೂ ಹತ್ತಿರದ ಸಂಬಂಧವೇನಾದ್ರೂ ಇರುತ್ತಾ?!

11 comments:

sunaath said...

ಶುಭದಾ,
ನೀವು ತುಂಬ ಭಾವಜೀವಿಗಳು ಅಂತ ಅನ್ನಿಸುತ್ತಿದೆ. ನಿಮ್ಮ ಮನಸ್ಸು ಯಾರನ್ನೂ ನೋಯಿಸದ ಮನಸ್ಸು. ಅದಕ್ಕೇ ಒಬ್ಬರನ್ನು ಹಚ್ಚಿಕೊಂಡರೆ, ಬಿಡಲಾರಿರಿ. ನಿಮ್ಮ ಬರಹವೂ ಸಹ ಅಷ್ಟೇ ಭಾವನಾತ್ಮಕವಾಗಿಯೇ ಇದೆ. ಆದರೆ, ಇಷ್ಟು ದಿನ ಎಲ್ಲಿ ಅಡಗಿ ಕೂತಿದ್ದಿರಿ?

ಸಂದೀಪ್ ಕಾಮತ್ said...

ಇಷ್ಟು ಒಳ್ಳೆಯ ಬ್ಲಾಗ್ ಅದು ಹೇಗೆ ನನ್ನ ಕಣ್ಣಿಂದ ಮಿಸ್ ಆಯ್ತು ಅಂತ !
೨೦೦೮ ಇದೆ ೨೦೧೦ ಇದೆ ಮಧ್ಯ ಎಲ್ಲ ಕಾಣೆ ಆಗಿದ್ರಿ?


ಸುನಾಥರು ಹೇಳಿದ ಹಾಗೆ ನೀವು ತುಂಬಾ ಭಾವಜೀವಿಗಳು ಅಂತ ಗೊತ್ತಾಗುತ್ತೆ.ದಯವಿಟ್ಟು ಹೀಗೆ ಬರೀತಿರಿ.

’ಶುಭ’ವಾಗಲಿ...

Shubhada ಶುಭದಾ said...

@ಸುನಾಥ ಕಾಕಾ,
ಹ್ಞೂ. ಬಹುಶಃ ಭಾವಜೀವಿಯೇ ಇರಬೇಕು :-)

@ಸಂದೀಪ್,
ಸ್ವಾಗತ. ರೆಗ್ಯುಲರ್ ಆಗಿ ಬರೀಬೇಕು ಅನ್ನೋ ಆಸೆ ಏನೋ ಇದೆ. ಆದ್ರೆ ಈ ಕೆಟ್ಟ ಉದಾಸೀನ ಬಿಡಬೇಕಲ್ಲ ;-) ಆಗಾಗ್ಗೆ ಬರೆಯೋ ಪ್ರಯತ್ನ ಮಾಡುತ್ತೇನೆ. ನಿಮ್ಮ ಪ್ರತಿಕ್ರಿಯೆಗೆ ತುಂಬು ಧನ್ಯವಾದಗಳು. ನಿಮ್ಮ ಬ್ಲಾಗ್ ಕೂಡ ತುಂಬ ಚೆನ್ನಾಗಿದೆ. ಹೀಗೇ ಬರೀತಿರಿ.

ಮನಮುಕ್ತಾ said...

ಶುಭದಾ ಅವರೆ,
ನಿಮ್ಮ ಬರಹ ತು೦ಬಾ ಚೆನ್ನಾಗಿದೆ.
ನಿಮ್ಮ ಒಳ್ಳೆಯತನ..ಬೇರೊಬ್ಬರ ಬಾವನೆಯನ್ನು ಗೌರವಿಸುವ ರೀತಿಗಳನ್ನು ನಿಮ್ಮ ಬರಹ ತಿಳಿಸುತ್ತದೆ. ಬರೆಯುತ್ತಿರಿ.

Shubhada ಶುಭದಾ said...

ಥ್ಯಾಂಕ್ಯೂ ಮನಮುಕ್ತಾ, ಸುಸ್ವಾಗತ :-)

ಸಾಗರದಾಚೆಯ ಇಂಚರ said...

ಶುಭದಾ
ತುಂಬಾ ಚೆಂದನೆಯ ಬರಹ
ನೀವು ಬರೆಯುತ್ತಿರಿ
ನಾವು ಬರುತ್ತಿರುತ್ತೇವೆ

Minchu said...

super kanri nimma blog , sadya nanna kannige bithu :)

- ಕತ್ತಲೆ ಮನೆ... said...

ಅದೆಷ್ಟು ಸುಂದರ ಸಾಲುಗಳು..

ಶಿವಶಂಕರ ವಿಷ್ಣು ಯಳವತ್ತಿ said...

ಸುನಾಥ ಕಾಕ ಹೇಳಿದ ಹಾಗೆ ನಿಜವಾಗಲೂ ನೀವು ಭಾವಜೀವಿಗಳು. ನಿಮ್ಮ ಭಾವನೆಗಳನ್ನು ಸಮರ್ಥವಾಗಿ ವ್ಯಕ್ತಪಡಿಸಿದ್ದೀರಿ.

-ಯಳವತ್ತಿ
www.shivagadag.blogspot.com

Anonymous said...

ನಮ್ಮೂರಿನ ಅ೦ಗಡಿಗಳು, ಬಸ್ ಕ೦ಡಕ್ಟರ್ ಗಳು, ಬ್ಯಾ೦ಕ್ ಕ್ಲೆರ್ಕ್ ಗಳು ಎಲ್ಲರೂ ಕಣ್ಣ್ ಮು೦ದೆ ಬ೦ದರು. ಕಾ೦ಕ್ರೀಟ್ ಕಾಡಿನಲ್ಲಿ ಮೆಷೀನ್ ಗಳ ನಡುವೆ ಬಿದ್ದ ಮನುಷ್ಯರ ಸ೦ಬ೦ಧಗಳ ಬಗ್ಗೆ ಸೂಪರ್ ಆಗಿ ಬರೆದಿದ್ದೀರಾ..

Harisha - ಹರೀಶ said...

ಬಹಳ ಆಪ್ತವಾಗಿದೆ.. ಹೆಚ್ಚು ಹೆಚ್ಚು ಬರೆಯುತ್ತಿರಿ :)