Wednesday, December 19, 2012

ಕಸ ಕ್ರಾಂತಿ

 
ನಾನಾಗ ೫ನೇ ಕ್ಲಾಸಲ್ಲಿ ಕಲಿಯುತ್ತಿದ್ದೆ. ಒಮ್ಮೆ ಶಾಲೆಯ ಆವರಣದಲ್ಲಿ ನಡೆದುಕೊಂಡು ಬರುತ್ತಿರಬೇಕಾದರೆ ಚ್ಯೂಯಿಂಗ್ ಗಮ್ ಒಂದು ಚಪ್ಪಲಿಗೆ ಮೆತ್ತಿಕೊಂಡಿತು. ಮಣ್ಣಿಗೆ ವರೆಸಿದರೂ, ಕೊಡಕಿದರೂ, ಏನು ಮಾಡಿದರೂ ಜಪ್ಪಯ್ಯ ಅನ್ನದೆ ನನ್ನ ಚಪ್ಪಲಿಯನ್ನಪ್ಪಿಕೊಂಡಿತ್ತದು. ಕೊನೆಗೆ ಕ್ಲಾಸಿನ ಹತ್ತಿರ ಬರುತ್ತಾ ಅಲ್ಲಿರೋ ಮೆಟ್ಟಿಲಿಗೆ ನೀಟಾಗಿ ಅದನ್ನ ಮೆತ್ತಿ ತೆಗೆದು ನಿಟ್ಟುಸಿರು ಬಿಟ್ಟು ಸಂಭಾವಿತರ ಥರ ಕ್ಲಾಸೊಳಗೆ ಬಂದು ಕುಳಿತುಕೊಂಡೆ. ಸ್ವಲ್ಪ ಹೊತ್ತಲ್ಲೇ ಕ್ಲಾಸಿಗೆ ಬಂದ ಮೇಷ್ಟ್ರು ಕೆರಳಿ ಕೆಂಡವಾಗಿದ್ದರು. "ಇವತ್ತು ಚ್ಯೂಯಿಂಗ್ ಗಮ್ ತಿಂದವರು ಯಾರು?" ಅಂತ ಅಬ್ಬರಿಸಿದರು. ಅದನ್ನು ನಿರೀಕ್ಷಿಸಿರದ ನನ್ನೆದೆಯಲ್ಲಿ ಅವಲಕ್ಕಿ ಕುಟ್ಟೋಕೆ ಪ್ರಾರಂಭವಾಯಿತು. ಅಷ್ಟರಲ್ಲಿ ದುರಾದೃಷ್ಟಕ್ಕೆ (ಅಥವಾ ನನ್ನ ಅದೃಷ್ಟಕ್ಕೆ) ಅದ್ಯಾವನೋ ಬಡಪಾಯಿ ಸತ್ಯಸಂಧ ತಾನು ತಿಂದಿದ್ದೇನೆಂದು ಒಪ್ಪಿಕೊಂಡ. ಅವನ ಬಳಿ ಸಾರಿದ ಮೇಷ್ಟ್ರು, "ಇದೇ ಏನು ನೀನು ಕಲಿತಿದ್ದು? ಚ್ಯೂಯಿಂಗ್ ಗಮ್ ಅನ್ನು ಮೆಟ್ಟಿಲಿಗೆ ಅಂಟಿಸಿದ್ದೀಯಲ್ಲ? ಎಷ್ಟು ಕೊಬ್ಬಿರಬೇಕು ನಿನಗೆ? ಉಳ್ಳಾಲ ತೋರಿಸ್ಬೇಕಾ?" ಎಂದು ಗದರುತ್ತ ಕಿವಿ ಹಿಂಡಿದರು. ಅವ ಅಯ್ಯೋ, ತಾನೆಲ್ಲೋ ಶಾಲೆಯ ಗೇಟಿನ ಹೊರಗೇ ತಿಂದು ಬಿಸಾಡಿದ್ದು. ಇಲ್ಲಿ ಹಾಕಿದ್ದು ತಾನಲ್ಲವೇ ಅಲ್ಲ ಅಂತೆಲ್ಲ ಹೆದರೆದರುತ್ತಲೇ ವಾದಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅಲ್ಲದೆ ನಾನೂ ಸತ್ಯ ಹೇಳಿ ತಪ್ಪು ಒಪ್ಪಿಕೊಳ್ಳುವಷ್ಟೆಲ್ಲ ಒಳ್ಳೆಯವಳಾಗಿರಲಿಲ್ಲ, ಹೀಗಾಗಿ, ಚ್ಯೂಯಿಂಗ್ ಗಮ್ ತಿಂದು ಶಾಲೆಯ ಆವರಣದಲ್ಲೇ ಬಿಸಾಡಿದವನ್ಯಾರೋ, ಯಾವ ಕ್ಲಾಸಿನವನೋ, ಅದನ್ನು ಚಪ್ಪಲಿಗೆ ಮೆತ್ತಿಸಿಕೊಂಡು ಮೆಟ್ಟಿಲಿಗೆ ವರೆಸಿದವರು ಇನ್ಯಾರೋ - ಅಂತೂ ಮಾಡದ ತಪ್ಪಿಗೆ, ಬರೀ ಚ್ಯೂಯಿಂಗ್ ಗಮ್ ತಿಂದ ಈ ಪಾಪದ ಹುಡುಗ ಧರ್ಮದೇಟು ತಿಂದು, ಮೆಟ್ಟಿಲಿಗಂಟಿದ್ದ ಚ್ಯೂಯಿಂಗ್ ಗಮ್ಅನ್ನು ಎತ್ತಿ ಅದಕ್ಕೆ ಪೇಪರ್ ಸುತ್ತಿ ಕಸದ ಬುಟ್ಟಿಗೆ ಎಸೆದು ಬರಬೇಕಾಯಿತು. ಅಷ್ಟಕ್ಕೇ ಬಿಡದೆ ಮೇಷ್ಟ್ರು ಆವತ್ತಿಡೀ ಪೀರಿಯಡನ್ನು ಕಸವನ್ನು ಎಲ್ಲಿ ಹೇಗೆ ಬಿಸಾಡಬೇಕು ಅನ್ನುವ ಸಾಮಾಜಿಕ ಪ್ರಜ್ಞೆ ಮೂಡಿಸುವುದಕ್ಕೆ ಮೀಸಲಿಟ್ಟರು. ಎಲ್ಲೆಂದರಲ್ಲಿ ಕಸ ಎಸೆದರೆ ಆಗುವ ದುಷ್ಪರಿಣಾಮಗಳ ಬಗ್ಗೆ ಹೇಳಿದರು.
 
ಇಷ್ಟಕ್ಕೆಲ್ಲ ಕಾರಣಕರ್ತಳಾದ ನನಗೆ ಈಗಲೂ ಚ್ಯೂಯಿಂಗ್ ಗಮ್ ಅಂದರೇನೇ ಭಯ! ಮತ್ತಿನ್ನೇನು ಕಸ ಕೈಲಿದ್ದರೂ ಎಲ್ಲೆಲ್ಲೋ ಎಸೆಯುವುದಕ್ಕೆ ಪಾಪಪ್ರಜ್ಞೆ ಕಾಡುತ್ತದೆ. ಹೋಗಲಿ ಅಂದರೆ ಬೇರೆಯವರು ಯಾರೋ ಎಲ್ಲೆಲ್ಲೋ ಕಸ ಬಿಸಾಡುತ್ತಿದ್ದರೂ ನೋಡಲು ಕಷ್ಟವಾಗುತ್ತದೆ. ಪೆಟ್ಟು ತಿಂದ ಕ್ಲಾಸ್^ಮೇಟ್ ನನ್ನೆದುರೇ ಬಂದು "ಸುಮ್ಮನೆ ನಂಗೆ ಪೆಟ್ಟು ತಿನ್ನಿಸಿದ್ಯಲ್ಲ? ಹೋಗು, ಅವರಿಗೆ ಬುದ್ಧಿ ಹೇಳು" ಎಂದು ಬೈದಂತೆ ಭ್ರಮೆಯಾಗುತ್ತದೆ! ಆದರೆ ಅದಾರಿಗೋ ಬುದ್ಧಿ ಹೇಳುವುದು ನಮ್ಮ ನಮ್ಮ ಪತಿದೇವರಿಗೆ ಮಂಗಳಾರತಿ ಎತ್ತಿದಷ್ಟು ಸುಲಭವೇ?! ಅವರಿಗಾದರೆ ನಾಳೆ ಬೆಳಗ್ಗಿನ ಕಾಫಿ ಕೊಕ್ ಮಾಡುತ್ತೇನೆಂದು ಹೆದರಿಸಿ, ಕಸವನ್ನು ಎಲ್ಲೆಂದರಲ್ಲಿ ಬಿಸಾಕದೆ ಜೇಬಿಗೆ ಹಾಕಿಕೊಂಡು ಕಸದ ಬುಟ್ಟಿ ಕಂಡಾಗ ಮಾತ್ರ ಎಸೆಯಬೇಕೆಂದು ಧಮಕಿ ಹಾಕಬಹುದು. ಹಾಗಂತ ಗುರುತು ಪರಿಚಯವೇ ಇರದ, ಪರಮ ನಾಗರಿಕರಂತೆ ಕಾಣುವ ಮಂದಿ ಲೇಸ್ ಪ್ಯಾಕೆಟನ್ನು ಖಾಲಿ ಮಾಡಿ ಎಡಗೈಯಿಂದ ಸ್ಟೈಲಾಗಿ ಅದನ್ನು ಗಾಳಿಗೆ ಹಾರಿಸಿ ಹಿಂತಿರುಗಿ ನೋಡದೇ ಹೋಗುತ್ತಿರುವಾಗ ಅಡ್ಡ ಹಾಕಿ, ಹಾಗೆ ಮಾಡಬೇಡಿರೆಂದು ಹೇಳಲು ಎಂಟೆದೆ ಧೈರ್ಯ ಬೇಡವೇ? ನೋಡುಗರಿಗೆ ಹೀಗೆ ಬುದ್ಧಿ ಹೇಳುವವರೇ ಅನಾಗರಿಕರೆಂದು ಅನಿಸಿದರೂ ಅಂಥ ಆಶ್ಚರ್ಯವೇನಿಲ್ಲ!
 
 
ಅಷ್ಟಕ್ಕೂ ಇದೆಲ್ಲ ನಾಗರಿಕರಾದ ನಮಗೆ ತಿಳಿಯದ ವಿಷಯವೇನಲ್ಲವಲ್ಲ! ರಸ್ತೆಯ ಕೊನೆಯಲ್ಲಿರುವ ದೇವಸ್ಥಾನಕ್ಕೆ ಬಂದ ಭಕ್ತಾದಿಗಳು ಅಲ್ಲಿ ಕೊಟ್ಟ ಪ್ರಸಾದವನ್ನು ತಿನ್ನುತ್ತಾ ಬಂದು ನಮ್ಮ ಮನೆ ಮುಂದೆ ಅದರ ಖಾಲಿ ತಟ್ಟೆಯನ್ನು ಅಯಾಚಿತವಾಗಿ ಬಿಸಾಕುತ್ತಾರಲ್ಲ? ಅದನ್ನ ಡಸ್ಟ್ಬಿನ್^ಗೆ ಹಾಕಬಾರದೇ? ಎಂಥ ಅಶಿಸ್ತಿನ ಜನ! ಎಂದು ಬೈದುಕೊಳ್ಳುತ್ತೇವೆ. ಆದರೆ ತಲೆಬಾಚುತ್ತ ಕೂದಲನ್ನೋ, ಚಾಕ್ಲೇಟ್, ಹಣ್ಣು ತಿಂದು ಅದರ ಸಿಪ್ಪೆಯನ್ನೋ ನಾವೇ ರಸ್ತೆಗೆ ಬಿಸಾಡುವಾಗ 'ಪರವಾಗಿಲ್ಲ ನಾಳೆ ಬೀದಿ ಗುಡಿಸುವವನು ಬರುತ್ತಾನಲ್ಲ' ಎಂತಲೇ ಸಮಜಾಯಿಷಿ ಕೊಟ್ಟುಕೊಳ್ಳುತ್ತೇವೆ. ಹಳ್ಳಿಗಳಲ್ಲಿ ಮಲವಿಸರ್ಜನೆಗೆ ರಸ್ತೆಬದಿಯಲ್ಲೇ ಕೂತು ಆ ರಸ್ತೆಯಲ್ಲಿ ಮನುಷ್ಯರು ಹೋಗಲಾರದಂತೆ ಮಾಡಿಬಿಡುತ್ತಾರೆ, ಕೊಳಕು ಮಂದಿ ಎಂದು ಬೈದುಕೊಳ್ಳುವ ನಾವು, ಅವರಾದರೋ ಮುಂದೆಂದೋ ಭೂಮಿಗೆ ಜೈವಿಕ ಗೊಬ್ಬರವಾಗುವಂಥದನ್ನು ಹಾಕುತ್ತಾರೆ, ನಾವು ಎಸೆಯುವ ಪ್ಲಾಸ್ಟಿಕ್ ಮಣ್ಣಲ್ಲಿ ಮಣ್ಣಾಗದ್ದು, ಬೆಂಕಿಯಿಂದ ಸುಡಲಾಗದ್ದು, ನೀರಲ್ಲಿ ಕರಗಲಾರದ್ದು ಅನ್ನುವ ಕಟುಸತ್ಯವನ್ನು ಬೇಕಂತಲೇ ಮರೆಯುತ್ತೇವೆ. ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಉಳಿದವರು ಬೇಕಾಬಿಟ್ಟಿಯಾಗಿ ಗುಡ್ಡೆ ಹಾಕಿರುವ ಪ್ಲಾಸ್ಟಿಕ್ ಕಸವನ್ನು ಕಂಡು ಕೋಪಗೊಳ್ಳುವ ನಾವು, 'ಗುಡ್ಡಕ್ಕೊಂದು ಕಡ್ಡಿ ಜಾಸ್ತಿಯಾಗುತ್ತದೆಯೇ? ಅದನ್ನೆಲ್ಲ ತೆಗೆಯುವಾಗ ಇದನ್ನೂ ತೆಗೆದುಬಿಡುತ್ತಾರೆ' ಅಂದುಕೊಳ್ಳುತ್ತ ನಮ್ಮ ಕೊಡುಗೆಯನ್ನೂ ಅಲ್ಲಿ ನೀಡಿಯೇ ಬಂದಿರುತ್ತೇವೆ. ಅಲ್ಲವೆ ಮತ್ತೆ? ಉಳಿದೆಲ್ಲರೂ ಹೀಗೆಯೇ ಮಾಡುವಾಗ ನಾವ್ಯಾಕೆ ಮಾಡಬಾರದು? ನಾವು ಮಾತ್ರ ಹೀಗೆ ಕಸವನ್ನು ಕಸದಬುಟ್ಟಿಗೆ ಹಾಕಿದರೆ ದೇಶ ಉದ್ಧಾರವಾಗಿ ಬಿಡುತ್ತದೆಯೇ? ಉಳಿದವರೆಲ್ಲ ಹಾಕಬೇಡವೇ? ಇಷ್ಟಕ್ಕೂ ದೇಶಕ್ಕೆ ಸ್ವಾತಂತ್ರ್ಯ ಬಂದು ಜಮಾನವೇ ಕಳೆದಿದೆ. ಇಷ್ಟ ಬಂದಲ್ಲಿ ಉಗಿಯುವ, ಕಸ ಎಸೆಯುವ ಕನಿಷ್ಟ ಸ್ವಾತಂತ್ರ್ಯವೂ ಬೇಡವೇ ನಮಗೆ?!
 
 
ಹೆಚ್ಚಿನ ಕೃಷಿಕರ ಮನೆಗಳಲ್ಲಿ ಮನೆ ಮುಂದಿನ ದಣಪೆಯಲ್ಲೇ ಚೀಲವೊಂದನ್ನು ಸಿಗಿಸಿ ಸುತ್ತಮುತ್ತ ಕಂಡ ಎಲ್ಲ ಪ್ಲಾಸ್ಟಿಕ್ ಕಸವನ್ನು ಆ ಚೀಲಕ್ಕೇ ಹಾಕುವಂತೆ ಮನೆಮಂದಿಗೆಲ್ಲ ಕಟ್ಟುನಿಟ್ಟು ಮಾಡಲಾಗಿರುತ್ತದೆ. ಅದೂ ಅಲ್ಲದೆ, ಸಾಮಾನು ತರುವಾಗ ಮನೆಯಿಂದಲೇ ಬಟ್ಟೆಯ ಚೀಲವನ್ನು ಕೊಂಡೊಯ್ದು ಅಲ್ಲೂ ಪ್ಲಾಸ್ಟಿಕ್ ಮನೆಗೆ ಬರುವುದನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆಯಾಗುವಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ಅವರ ಮನೆ, ತೋಟ, ಗದ್ದೆಗಳೆಲ್ಲ ಸರ್ಕಾರದ ಯಾವ ಕಾನೂನುಗಳಿಲ್ಲದೆಯೂ ಪ್ಲಾಸ್ಟಿಕ್ ಫ್ರೀ ಝೋನ್^ಗಳಾಗಿರುತ್ತವೆ. ಅನುಕರಣೀಯ ಅನಿಸಿದರೂ, ಇದು ನಮಗೆ ಗೊತ್ತಿರದ ಹೊಸ ವಿಚಾರವೇನಲ್ಲ ಅಂದುಕೊಂಡರೂ ಹೇಳಿ ಕೇಳಿ ಹಳ್ಳಿಯ ಕೃಷಿಕರಿಗಿಂತ ನಾಗರಿಕತೆಯಲ್ಲಿ ಮುಂದಿರುವವರು ಎಂಬ ಭ್ರಮೆಯಲ್ಲಿರುವ ನಾವು ಮಾರ್ಕೆಟ್^ಗೆ ಹೋಗುವಾಗ ಚೀಲ ಹಿಡಿದುಕೊಳ್ಳಲು ಅದು ಹೇಗೋ ಸಿಕ್ಕಾಪಟ್ಟೆ ಕಾರ್ಯದೊತ್ತಡದಿಂದ ಮರೆತೇ ಹೋಗಿರುತ್ತೇವೆ!. ಯಾರೇನು ಮಾಡಲಾದೀತು?
 
 
ಇದೆಲ್ಲ ಬಿಡಿ. ರಜನಿಕಾಂತನ 'ಶಿವಾಜಿ' ಚಲನಚಿತ್ರದಲ್ಲಿ ಅವ ತನ್ನೆಲ್ಲ ಆಸ್ತಿಪಾಸ್ತಿ ಕಳೆದುಕೊಂಡ ನಂತರ ತನ್ನಲ್ಲಿರುವ ಪರ್ಸನ್ನೂ, ಅದರೊಳಗಿರುವ ಕ್ರೆಡಿಟ್ ಕಾರ್ಡ್ ಇತ್ಯಾದಿಗಳನ್ನೂ ರಸ್ತೆಗೆ ಎಸೆಯುವ ದೃಶ್ಯವೊಂದಿದೆ. ಅದೇನಾದರೂ ಇಂಗ್ಲಿಷ್ ಮೂವಿಯಾಗಿದ್ದರೆ ಪರ್ಸು ಕ್ರೆಡಿಟ್ ಕಾರ್ಡುಗಳೆಲ್ಲ ರಸ್ತೆಯ ಬದಲು ಕಸದ ಬುಟ್ಟಿಯಲ್ಲಿ ಬಿದ್ದು ಮೋಕ್ಷ ಕಾಣಬೇಕಾಗುತ್ತಿತ್ತು. ಅಂಥಾ ರಜನಿಕಾಂತನಂಥ ರಜನಿಕಾಂತನೇ ಹೀಗೆ ಮಾಡಿದ ಮೇಲೆ ಹುಲುಮಾನವರಾದ ನಾವು ಕಸವನ್ನು ಕಸದಬುಟ್ಟಿಗೇ ಹಾಕಬೇಕೆಂದು ನಿರೀಕ್ಷಿಸುವುದು ತಪ್ಪಲ್ಲವೇ? ರಜನಿಕಾಂತನೇನಾದರೂ ಆವತ್ತು ಕಸವನ್ನ ರಸ್ತೆಗೆ ಎಸೆಯೋ ಬದಲು ಕಸದ ಬುಟ್ಟಿಗೆ ಹಾಕಿದ್ದಿದ್ದರೆ ಇಡೀ ಇಂಡಿಯಾದ ಗಲ್ಲಿ ಗಲ್ಲಿ ರಸ್ತೆ ರಸ್ತೆಗಳಲ್ಲೂ ಕಸವೆಂಬ ಜಾತಿಯೇ ಕಾಣಿಸುತ್ತಿರಲಿಲ್ಲವೇನೋ ಅಂತ ನಂಗೆ ಈಗಲೂ ಅನಿಸುತ್ತೆ.
 
 
ಮಣ್ಣಲ್ಲಿ ಅದೆಷ್ಟೇ ವರ್ಷ ಇದ್ದರೂ ಎಂದೂ ಕರಗದ ಉಪದ್ರಕಾರಿ ಪ್ಲಾಸ್ಟಿಕಾಸುರನಂತೆ, ಇಷ್ಟು ವರ್ಷಗಳಾದರೂ ನನ್ನ ಮನಸ್ಸಿನೊಳಗೆ ಮರೆಯಾಗದೇ ಬಚ್ಚಿಟ್ಟುಕೊಂಡು ಕಾಟ ಕೊಡುತ್ತಿರುವ (ನನ್ನಿಂದಾಗಿ ಆವತ್ತು ಧರ್ಮದೇಟು ತಿಂದ) ಹುಡುಗನ ಬಳಿ ಇಂಥ ಪರಮ ಸತ್ಯಗಳನ್ನ ಹೇಳಿದರೆ ಕೇಳುತ್ತಾನೆಯೇ? "ಇದೆಲ್ಲ ನಡೆಯೋದಿಲ್ಲ. ನನಗೆ ಸುಮ್ಮಸುಮ್ಮನೆ ಶಿಕ್ಷೆ ಕೊಡಿಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ನೀನೇನಾದರೂ ಮಾಡಲೇಬೇಕು! ಕಸ ವಿಲೇವಾರಿಯ ಬಗ್ಗೆ ಎಲ್ಲರಿಗೆ ತಿಳಿ ಹೇಳು. ಪ್ಲಾಸ್ಟಿಕ್^ನ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡುವಂತೆ ಆಗ್ರಹಿಸು. ಮುಖ್ಯವಾಗಿ ಮಕ್ಕಳಲ್ಲಿ ಹಾಗೂ ಅವರಿಗೆ ವಿದ್ಯೆ ಕಲಿಸುವ ಶಿಕ್ಷಕರಲ್ಲಿ ಅರಿವು ಮೂಡಿಸು. ಪುಟ್ಟ ಮಕ್ಕಳನ್ನು ನೋಡಿಯಾದರೂ ದೊಡ್ಡವರೆನಿಸಿಕೊಂಡವರು ಕಲಿತುಕೊಂಡಾರು. ದೇಶದಲ್ಲಿ ನಿನ್ನಿಂದ ಕಸದ ಕ್ರಾಂತಿ ನಡೆಯಲಿ!!" ಎಂದು ಹುಕುಂ ನೀಡುತ್ತಾನೆ. ಆವತ್ತೇ ಆ ಕ್ಲಾಸಲ್ಲೇ ಸತ್ಯ ಒಪ್ಪಿಕೊಂಡಿದ್ದರೆ ಹೆಚ್ಚೆಂದರೆ ಎರಡೇಟು ತಿಂದು, ನಾಲ್ಕು ಹನಿ ಕಣ್ಣೀರು ಸುರಿಸಿ ಆ ವಿಚಾರವನ್ನಲ್ಲಿಗೇ ಬಿಟ್ಟು, ಇವತ್ತು ಎಲ್ಲರಂತೆ ಅದೆಲ್ಲಿ ಬೇಕಾದರೂ ಕಸವನ್ನು ಯಾವುದೇ ಬೇಜಾರಿಲ್ಲದೆ ಎಸೆದು ಆರಾಮಾಗಿರಬಹುದಾಗಿತ್ತು ನಾನು. ಅದೂ ಅಲ್ಲದೆ ಸತ್ಯ ಒಪ್ಪಿಕೊಂಡು ಮಹಾನ್ ವ್ಯಕ್ತಿಗಳ ಸಾಲಿಗೇ ಸೇರುತ್ತಿದ್ದೆನೋ ಏನೋ! ಆದರೆ ಅಂದು ಸತ್ಯ ಮುಚ್ಚಿಟ್ಟ ಗ್ರಹಚಾರಕ್ಕೆ ಇವ ಇಂದು ನನ್ನನ್ನು ಕ್ರಾಂತಿಕಾರಿಯಾಗಿಸ ಹೊರಟಿದ್ದಾನೆ. ತರಕಾರಿಯವನೊಂದಿಗೆ ಚೌಕಾಶಿ ಮಾಡುವುದಕ್ಕೇ ಹಿಂದೆಮುಂದೆ ನೋಡುವ ಯಕಶ್ಚಿತ್ ಶ್ರೀಸಾಮಾನ್ಯರಲ್ಲೊಬ್ಬಾಕೆಯಾದ ನನ್ನಿಂದ ಇದು ಸಾಧ್ಯವೇ?! ಹೆಚ್ಚೆಂದರೆ, ನಮ್ಮ ಮನೆಯಲ್ಲಿ ಇದನ್ನು ಅನುಷ್ಠಾನಕ್ಕೆ ತರಬಲ್ಲೆ. ಅದು ಬಿಟ್ಟರೆ, ನೀವ್ಯಾರೋ ಒಳ್ಳೆಯವರಂತೆ, ನನ್ನ ಕಷ್ಟವನ್ನು ಅರ್ಥ ಮಾಡಿಕೊಳ್ಳುವವರಂತೆ ಕಾಣಿಸುತ್ತಿದ್ದೀರಿ. ನಿಮ್ಮನ್ನು ವಿನಯಪೂರ್ವಕವಾಗಿ ಕೇಳಿಕೊಳ್ಳಬಲ್ಲೆ. "ದಯವಿಟ್ಟು ನಿಮ್ಮ ಮನೆಯಲ್ಲೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ನಿಮ್ಮ ಕೈಲಿರೋ ಪ್ಲಾಸ್ಟಿಕ್ ಕಸವನ್ನು ಅಲ್ಲೇ ನಿಮಗೆ ಕೊಂಚವೇ ದೂರದಲ್ಲಿರೋ ಕಸದ ಬುಟ್ಟಿಗೇ ಹಾಕಿ ಬಿಡಿ. ಪ್ಲೀಸ್..."