Sunday, March 23, 2008

ಯಶಸ್ವೀ ಪುರುಷನ ವೃತ್ತಾಂತ

ಮೊನ್ನೆ ಸಂಜೆ ಬೆಂಗಳೂರಲ್ಲಿ ‘ಧೋ’ ಅಂತ ಜೋರು ಮಳೆ! ‘ಇದೇನಪ್ಪಾ, ಮಾರ್ಚಲ್ಲೇ ಮಳೆ? ಆಯ್ತು, ಇನ್ನು ಬೆಂಗಳೂರಲ್ಲಿ ಪ್ರವಾಹ ಶುರು!’ ಅಂತ ಅಂದುಕೊಳ್ಳುತ್ತಿರಬೇಕಾದರೆ BESCOMನವರೂ ಕೈಕೊಟ್ಟರು. ಬೆಂಗಳೂರಲ್ಲಿ ಕರೆಂಟ್ ಹೋದರೆ (ಅದೂ ಮಳೆ ಬರುತ್ತಿರಬೇಕಾದರೆ!) ಭಯಂಕರ ಬೋರಾಗುತ್ತದಾದ್ದರಿಂದ ಮಳೇಲಿ ಯಾರಿಗೂ ಕೇಳಿಸದು ಅಂತ ಧೈರ್ಯದಲ್ಲಿ ಸ್ವಲ್ಪ ಗಟ್ಟಿಯಾಗೇ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ...’ ಅಂತ ಆರ್ತನಾದ ಮಾಡುತ್ತಿದ್ದೆ! ನನ್ನ ಅರಚಾಟ ಪಕ್ಕದ ಮನೆಯವರಿಗಾಗಲೀ, BESCOMನವರಿಗಾಗಲೀ ಕೇಳಿಸಿತೋ ಇಲ್ಲವೋ, ಆದರೆ ಭಗವಂತ ಮಾತ್ರ ಕೇಳಿಯೇ ಕೇಳಿದ. ದೀನಳ ಮೊರೆಯನ್ನು ಆಲಿಸಿದಂತವನಾಗಿ ಮಿಂಚಿನ ರೂಪದಲ್ಲಿ ಬೆಳಕನ್ನೂ, ಗುಡುಗಿನ ರೂಪದಲ್ಲಿ ನನ್ನ ಹಾಡಿಗೆ ಸಾಥಿಯನ್ನೂ ದಯಪಾಲಿಸುವಂತವನಾದ! ವಿಷಯ ಇದಲ್ಲ, ಆ ಹಾಡಿನ ಪ್ರಭಾವವೋ, ಅಥವಾ ಭಗವಂತನ ದಯೆಯೋ, ಅಂತೂ ಆ ಕತ್ತಲಲ್ಲಿ ನನಗೆ ಯಾವತ್ತೋ ಓದಿದ ಲೇಖನವೊಂದರಲ್ಲಿದ್ದ ‘ಯಶಸ್ವೀ ಪುರುಷನ ವೃತ್ತಾಂತ’ ಥಟ್ಟಂತ ಫ್ಲಾಷ್ ಆಯ್ತು, ಥೇಟ್ ಆಗಸದಲ್ಲಿ ಮಿಂಚಾದಂತೆ.

ಅವನ ಕಥೆ ಹೇಳುವ ಮೊದಲು, ನನ್ನ ಅದ್ಭುತ ಸ್ಮರಣಶಕ್ತಿಯ ಬಗ್ಗೆ ನಿಮಗೆ ಹೇಳಿಬಿಡುವುದು ವಾಸಿ. ನಾನು ಸಿಕ್ಕಾಪಟ್ಟೆ ಓದುತ್ತೇನಾದರೂ ಅದೆಲ್ಲ ಬಹುಷ: ನನ್ನ ಕ್ಯಾಶ್ ಮೆಮೊರಿ ಎಂಬ ಟೆಂಪರರಿ ಸ್ಮರಣ ಕೋಶದಲ್ಲಿ ಮಾತ್ರ ಸೇವ್ ಆಗುತ್ತದಾದ್ದರಿಂದ, ಸಿಕ್ಕಾಪಟ್ಟೆ ವೇಗದಲ್ಲಿ ಅದನ್ನ ಮರೆತೂಬಿಡುತ್ತೇನೆ. ಹಾಗಾಗಿ ಆ ಲೇಖನದ ಪೂರ್ತಿ ವಿವರಗಳನ್ನು ಕೊಡಲಾರೆ. ಆ ಲೇಖನ ಬರೆದವರಾರು, ಯಾವ ವಿಷಯವಾಗಿ ಬರೆಯುತ್ತಾ ಈ ವೃತ್ತಾಂತವನ್ನು ಉಲ್ಲೇಖಿಸಿದರು ಎಂಬಿತ್ಯಾದಿ ವಿವರಗಳು ನನಗೆ ಸ್ವಲ್ಪವೂ ನೆನಪಿಲ್ಲ. ಹೋಗಲಿ ಎಂದರೆ, ಆ ಯಶಸ್ವಿ ಪುರುಷನ ಕಥೆಯೂ ಪೂರ್ತಿಯಾಗಿ ನೆನಪಾಗುತ್ತಿಲ್ಲ. ಹಾಗಾಗಿ ಸಾರಾಂಶವನ್ನಷ್ಟೇ ಇಲ್ಲಿ ಕೊಡಬಲ್ಲೆ. ನೀವೂ ಓದಿರಬಹುದು, ಆ ಲೇಖನವನ್ನ. ಪ್ರಾಯಶಃ ೫-೬ (ತೀರ ಹೆಚ್ಚೆಂದರೆ ೭-೮) ವರ್ಷಗಳ ಹಿಂದೆ ಉದಯವಾಣಿಯಲ್ಲಿ ಪ್ರಕಟವಾದ ಲೇಖನ ಪ್ರಾಯಶಃ ಅದು. (ಅಗೈನ್, ನನ್ನ ನೆನಪಿನ ಬಗ್ಗೆ ಯಾವ ಭರವಸೆ ಕೊಡಲಾರೆ!). ನಿಮಗೆ ನೆನಪಿದ್ದಲ್ಲಿ, ಅಥವಾ ಬರೆದವರೇ ನೀವಾಗಿದ್ದಲ್ಲಿ ದಯವಿಟ್ಟು ನನ್ನ ಉದ್ಧಟತನವನ್ನು ಮನ್ನಿಸಿ ಆ ಲೇಖನದ ವಿವರಗಳನ್ನು ನನ್ನ ಜೊತೆಗೂ ಹಂಚಿಕೊಳ್ಳಿ. ಆ ವೃತ್ತಾಂತದ ಸಾರಾಂಶ ಹೀಗಿದೆ:

ಆತ ಚಿಕ್ಕ ವಯಸ್ಸಿನಲ್ಲೇ ಹಲವಾರು ಅಪ್ರತಿಮ ಸಾಧನೆಗಳನ್ನು ಮಾಡಿದ ಪ್ರತಿಭಾವಂತ (ಇಷ್ಟೆಲ್ಲ ಮರೆತಿರೋಳು ಇನ್ನು ಅವ್ನ ಹೆಸರನ್ನ ನೆನಪಿಟ್ಕೊಂಡಿರ್ತೀನಾ? ;-)). ಅವನ ಸಾಧನೆಗಳಿಗಾಗಿ ಅವನನ್ನು ಗೌರವಿಸುತ್ತಾ ಅವನ ಸಾಧನೆಗಳ ಹಿಂದಿನ ಸ್ಫೂರ್ತಿಯ ಸೆಲೆ ಯಾವುದು ಅಂತ ಕೇಳಿದಾಗ ಆತ ತನ್ನ ಅಜ್ಜಿಯ ಕುರಿತು ಹೇಳುತ್ತಾನೆ. ಬಾಲ್ಯದಲ್ಲಿ ಆತ ಇಳಿವಯಸ್ಸಿನ ತನ್ನ ಅಜ್ಜಿ ಅಲವತ್ತುಕೊಳ್ಳುವುದನ್ನು ಕೇಳುತ್ತಾನೆ. ‘ನನ್ನ ಹರೆಯದಲ್ಲಿ ನಾನು ಏನೇನೋ ಕನಸುಗಳನ್ನ ಕಂಡಿದ್ದೆ. ಹಲವಾರು ಆಸೆಗಳನ್ನ, ಗುರಿಗಳನ್ನ ಸಾಧಿಸಬೇಕೆಂದುಕೊಂಡಿದ್ದೆ. ಆದರೆ ಸಮಯದ ಕಾರಣದಿಂದಲೋ, ಆರ್ಥಿಕ ಕಾರಣಗಳಿಂದಲೋ, ಅಥವಾ ಉದಾಸೀನತೆಯಿಂದಲೋ ಎಲ್ಲವನ್ನೂ ಮುಂದೂಡುತ್ತಾ ಬಂದೆ. ಈಗ ನನ್ನಲ್ಲಿ ಸಮಯ, ಹಣ, ಆಸೆ ಎಲ್ಲವೂ ಇದೆ. ಆದರೆ ಅದನ್ನೆಲ್ಲ ಸಾಧಿಸುವ ಶಕ್ತಿಯಾಗಲೀ, ಉತ್ಸಾಹವಾಗಲೀ ಇಲ್ಲ. ಅವನ್ನು ಸಾಧಿಸಲಾಗಲಿಲ್ಲವೆಂಬ ಕೊರಗು ಮಾತ್ರ ಇದೆ’. ಅಜ್ಜಿಯ ಈ ದುಃಖವನ್ನು ಮನಗಂಡ ಹುಡುಗ ಆ ಕ್ಷಣದಲ್ಲೇ ‘ತನ್ನ ಜೀವನದಲ್ಲಿ ಹೀಗಾಗಲು ಬಿಡಲಾರೆ’ ಎಂದು ನಿರ್ಧಾರ ಮಾಡುತ್ತಾನೆ. ತನ್ನ ಆಸೆಗಳು, ಗುರಿಗಳು ಏನೇನಿವೆಯೋ ಅವನ್ನೆಲ್ಲ ಪಟ್ಟಿ ಮಾಡಲಾರಂಭಿಸುತ್ತಾನೆ. ಸಣ್ಣ ಪುಟ್ಟ ಕೆಲವು ಆಸೆಗಳಿಂದ ಆರಂಭಗೊಂಡ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ದಿನವೂ ಆ ಪಟ್ಟಿಯನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಂಡದ್ದರಿಂದ ಹುಡುಗನಿಗೆ ಆ ಗುರಿಗಳನ್ನು ಸಾಧಿಸಲು ಅಗತ್ಯವಾದ ಯೋಜನೆಗಳನ್ನು ಪರಿಪೂರ್ಣವಾಗಿ ರೂಪಿಸಲು ಸಾಧ್ಯವಾಗುತ್ತದೆ. ಹುಡುಗ ಸಫಲನಾಗುತ್ತಾನೆ. ಹೇಳಲೇಬೇಕಾದ ವಿಷಯವೆಂದರೆ ಅವನ ಪಟ್ಟಿಯೇನೂ ತೀರ ಸರಳ ಆಸೆಗಳಿಂದ ಕೂಡಿದ್ದಾಗಿರಲಿಲ್ಲ. ಅತ್ಯಂತ ಕ್ಲಿಷ್ಟ, ಅಸಾಧ್ಯವೆನಿಸುವಂತ ಆಸೆಗಳೂ ಅದರಲ್ಲಿದ್ದುವು (ಉದಾಹರಣೆಗೆ, ಮೌಂಟ್ ಎವರೆಸ್ಟ್ ಏರುವುದು, ಪ್ರಪಂಚ ಪರ್ಯಟನ ಇತ್ಯಾದಿ). ಆದರೂ ತನ್ನ ಸಮಯ, ಸಂಪನ್ಮೂಲಗಳನ್ನು ಸದುಪಯೋಗ ಮಾಡಿದ್ದರಿಂದಾಗಿ ಅವನಿಗೆ ಚಿಕ್ಕ ವಯಸ್ಸಿನಲ್ಲೇ, ಕ್ಲಿಷ್ಟ ಗುರಿಗಳಲ್ಲೂ ಹಲವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈ ಲೇಖನವನ್ನೋದಿದಾಗ ಎಷ್ಟು ಪ್ರಭಾವಿತಳಾಗಿದ್ದೆನೆಂದರೆ, ಲೇಖನವನ್ನು ಓದಿ ಮುಗಿಸಿದವಳೇ ನನ್ನದೊಂದು ಆಸೆಗಳ ಪಟ್ಟಿಯನ್ನು ಬರೆಯಲು ಪ್ರಾರಂಭಿಸಿದ್ದೆ. ಅದನ್ನು ಕೆಲ ದಿವಸಗಳ ಕಾಲ ಪ್ರತಿನಿತ್ಯ ಓದುತ್ತ, ಪಟ್ಟಿಯನ್ನು ಬೆಳೆಸುತ್ತ ಹೋಗಿದ್ದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ಅಭ್ಯಾಸ ನನಗೆ ಬಹಳ ಸಹಕಾರಿಯಾಗಿತ್ತು ಕೂಡ! ಆದರೆ ಆಮೇಲೆ ಅದೇನಾಯ್ತೋ, ಪ್ರಾಯಶಃ ಪರೀಕ್ಷಾ ಸಮಯದಲ್ಲಿ ಬುದ್ಧಿ ಡೈವರ್ಟ್(!) ಆಗುತ್ತದೆ ಅಂತಲೋ ಏನೋ ನಿಲ್ಲಿಸಿದ್ದು ಆಮೇಲೆ ಬಿಟ್ಟೇ ಹೋಯ್ತು. ಮತ್ತೆ ನೆನಪಾಗಿದ್ದು ಮೊನ್ನೆಯೇ! ಥ್ಯಾಂಕ್ಸ್ ಟು ಬೆಂಗಳೂರು ಮಳೆ! ನನ್ನಂತೆ ದಿನವಿಡೀ ಭಾರೀ ‘ಬಿಜಿ ’ ಎಂಬಂತೆ ಏನೂ ಮಾಡದೆ ಪೋಸು ಕೊಡುತ್ತಿರುವವರಿಗೆ ಇದೊಂದು ಅಭ್ಯಾಸ ಉಪಕಾರಿಯೇನೋ ಅನಿಸಿತು. ನನ್ನ ಇನ್ನೊಂದು ಪಟ್ಟಿಯನ್ನೂ ಬೆಳೆಸಬೇಕು. ಮತ್ತೆ ಊರಲ್ಲಿ ಅದೆಲ್ಲೋ ಅಟ್ಟದಲ್ಲಿ ಧೂಳು ತಿನ್ನುತ್ತಿರಬಹುದಾದ ನನ್ನ (ಹಳೆಯ) ಕನಸುಗಳನ್ನು ಹುಡುಕಿ ತೆಗೆದು ಜೀವ ತುಂಬಬೇಕು ಅಂದುಕೊಳ್ಳುವಷ್ಟರಲ್ಲಿ ಟ್ಯೂಬ್‍ಲೈಟ್ ಬೆಳಗಿತು! ಶುಭಸೂಚನೆ ಅನಿಸಿ ಖುಷಿಯಾಯ್ತು.

ಇವಿಷ್ಟು ನನ್ನ ಕತ್ತಲ ಯೋಚನೆ. ನನ್ನ ಯೋಜನೆ ಮರುದಿನವೇ ಕಾರ್ಯಗತವಾಗಿ, ನನ್ನ ಹೊಸ ಲಿಸ್ಟ್ ತಯಾರಾಗಿದ್ದರಿಂದಾಗಿ ಮತ್ತು ಆ ಲಿಸ್ಟಲ್ಲಿ ಈ ವಿಷಯದ ಬಗ್ಗೆ ಬ್ಲಾಗಲ್ಲಿ ಬರೆಯಬೇಕೆಂಬ ಆಸೆ ಮೊದಲಿದ್ದುದರಿಂದಾಗಿ ಈ ಬರಹ ನಿಮ್ಮ ಮುಂದಿದೆ. ನಿಮಗೆ ಇಷ್ಟವಾಗಿರದಿದ್ದಲ್ಲಿ, ಮಾರ್ಚಲ್ಲೇ ಅಚಾನಕ್ ಮುಖ ತೋರಿದ ಮಳೆಗೆ, ಮನೆ ಕತ್ತಲಾಗಿಸಿದ ಇಲಾಖೆಯವರಿಗೆ, ನನ್ನ ಪ್ರಾರ್ಥನೆಗೆ ಓಗೊಟ್ಟು ಬೆಂಗಳೂರಲ್ಲೂ ಅಪರೂಪಕ್ಕೆ ಆಗಮಿಸಿದ ಮಿಂಚು-ಗುಡುಗಿಗೆ(!) ಧಾರಾಳವಾಗಿ ಬೈದು ಬಿಡಿ. ನಾನಂತೂ ನಿರಪರಾಧಿ! :-)

ಬರೆಯುತ್ತಿರಬೇಕಾದರೆ ಮತ್ತೆ ಅನಿಸಿತು. ಅದು ಆ ಯಶಸ್ವಿ ಪುರುಷನ ಅಜ್ಜಿಯ ಬಗ್ಗೆ. ಆಕೆ ಅಷ್ಟು ಕೊರಗಬೇಕಾದ ಅಗತ್ಯವಿತ್ತೇ ಅಂತ ಅನಿಸುತ್ತಿದೆ. ವಯೋವೃದ್ಧರ ಮನಸ್ಥಿತಿಯ ಬಗ್ಗೆ ಕಲ್ಪಿಸಲೂ ನಮಗೆ ಅಸಾಧ್ಯ ಎಂಬುದು ವಾಸ್ತವವಾದರೂ, ನನ್ನ ದೊಡ್ಡಮ್ಮನ (ಅಪ್ಪನ ಅಮ್ಮ) ಬದುಕನ್ನು ನೋಡಿದ ನನಗೆ ಯಶಸ್ವೀ ಪುರುಷನ ಅಜ್ಜಿ ಅಷ್ಟು ದುಃಖಿಸಬೇಕಾದ್ದಿರಲಿಲ್ಲ ಅಂತ ತೀವ್ರವಾಗಿ ಅನಿಸಿತು. ೯೩ರ ಇಳಿಹರೆಯದ ನಮ್ಮ ದೊಡ್ಡಮ್ಮ ತುಂಬು ಜೀವನೋತ್ಸಾಹದ ಪ್ರತೀಕ. ಈಗಲೂ ತಮ್ಮಿಂದಾದಷ್ಟು ಕೆಲಸವನ್ನು ಮಾಡುತ್ತ, ಕನ್ನಡಕವಿಲ್ಲದೆ ಪುಸ್ತಕಗಳನ್ನು ಓದುತ್ತ, ಭಜನೆಗಳನ್ನು ಹಾಡುತ್ತ ತಮ್ಮ ದೈಹಿಕ ತೊಂದರೆಗಳನ್ನು ಮರೆಯುವ, ಸದಾ ಹಸನ್ಮುಖಿಯಾಗಿರುವ ದೊಡ್ಡಮ್ಮ ನಮಗೂ ಉತ್ಸಾಹ ತುಂಬುತ್ತಾರೆ. ಅವರ ನೆನಪಿನ ಭಂಡಾರದಿಂದ ಆಯ್ದ ಹಲವು ಸಾಂಪ್ರದಾಯಿಕ ಹಾಡುಗಳನ್ನು, ರಂಗೋಲಿಗಳನ್ನು ಸಂಗ್ರಹಿಸಿ ೨ ವರ್ಷಗಳ ಹಿಂದೆ ಪುಸ್ತಕ ರೂಪದಲ್ಲೂ ಪ್ರಕಟಿಸಲಾಯ್ತು. ಕೇವಲ ಬಾಯ್ದೆರೆಯಾಗಿ ಬಂದ ಆ ಹಾಡುಗಳನ್ನೆಲ್ಲ ಈಗಲೂ ನೆನಪಿಟ್ಟುಕೊಂಡಿರುವ ದೊಡ್ಡಮ್ಮನ ನೆನಪಿನ ಶಕ್ತಿ ನನ್ನದಕ್ಕಿಂತ ಎಷ್ಟೋ ವಾಸಿ ಅಂತ ಏನೂ ನಾಚಿಕೆಯಿಲ್ಲದೆ ಒಪ್ಪಿಕೊಂಡುಬಿಡುತ್ತೇನೆ! ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನ ನೆಂಪು.ಗುರು ಮುಂದೆ ತಮ್ಮ ಬ್ಲಾಗಲ್ಲಿ ನೀಡಲಿದ್ದಾರೆ. ಅವರನ್ನ ನೋಡಿದಾಗೆಲ್ಲ ವಯಸ್ಸಿನ ಭೇದವಿಲ್ಲದೆ, ತಮ್ಮಿಂದಾದಷ್ಟು ಸಾಧನೆಗಳನ್ನು ಯಾರು ಬೇಕಾದರೂ ತಮ್ಮ ತಮ್ಮ ಮಿತಿಯಲ್ಲೇ ಮಾಡಬಹುದು ಅಂತ ನನಗನಿಸುತ್ತದೆ. ಈ ಬಗ್ಗೆ ನಿಮಗೇನು ಅನಿಸಿತು?

Sunday, March 9, 2008

ರಸ್ತೆ ದಾಟುವಾಗ...

ಹಾಗಂತ ನನಗೆ ರಸ್ತೆ ದಾಟುವಾಗ ಭಯವೇನೂ ಆಗುವುದಿಲ್ಲ. ಆದರೂ ರಸ್ತೆ ದಾಟುವಾಗೆಲ್ಲ ನನ್ನ ಕೈ ಪಕ್ಕದಲ್ಲಿರುವವರ ಕೈ ಹಿಡಿದುಕೊಳ್ಳಲು ಹವಣಿಸುತ್ತಿರುತ್ತದೆ! (ಬಹುಶಃ ಬಾಲ್ಯದಲ್ಲಿ ಅಪ್ಪ ರಸ್ತೆ ದಾಟಿಸುವಾಗ ಕಿರು ಬೆರಳನ್ನು ಹಿಡಿದುಕೊಳ್ಳುತ್ತಿದ್ದುದರ ಪ್ರಭಾವ ಇರಬೇಕು). ನನ್ನ ಆತ್ಮೀಯ ಬಂಧುಗಳೊಂದಿಗೆ ಹೋಗುವಾಗಂತೂ ಯಾವುದೇ ಮುಲಾಜಿಲ್ಲದೆ ಅವರ ಕೈ (ಕೊಕ್ಕೆ ಹಾಕಿ!) ಹಿಡಿದುಕೊಂಡಿರುತ್ತೇನೆ. ನನ್ನ ಈ (ಕೆಟ್ಟ) ಅಭ್ಯಾಸ ಗೊತ್ತಿರುವ ಗೆಳತಿಯರು ತಾವೇ ನನ್ನ ಕೈ ಎಳೆದು, ‘ರಸ್ತೆ ದಾಟಬೇಕಲ್ಲ, ಕೈ ಹಿಡಿದುಕೋ ಪುಟ್ಟಾ..’ ಅಂತ ತಮಾಷೆ ಮಾಡುತ್ತಾರೆ. ನನಗೇನೂ ಬೇಜಾರಿಲ್ಲ ಬಿಡಿ, ಸಧ್ಯ, ಕೈ ಹಿಡಿದುಕೊಂಡರಲ್ಲ ಅಂತ ಸಮಾಧಾನವಾಗುತ್ತೆ!

ಹಾಗಂತ ಒಬ್ಬಳೇ ರಸ್ತೆ ದಾಟುವಾಗ ಯಾರದೋ ಕೈ ಹಿಡಿಯ ಹೋಗುವುದಿಲ್ಲ ಬಿಡಿ. ಎಡ, ಬಲ, ಹಿಂದೆ, ಮುಂದೆ ಎಲ್ಲ ನೋಡಿ, (ಒನ್ ವೇ ಆಗಿದ್ದರೂ ಎರಡೂ ಬದಿ ನೋಡಿಕೊಂಡು) ಅವಸರದಲ್ಲಿರುವ ಸವಾರರಿಗೆಲ್ಲ ಹೋಗ ಬಿಟ್ಟು ಆಮೇಲೆ ಜಾಗ್ರತೆಯಾಗಿ ರಸ್ತೆ ದಾಟಿ ನಿಟ್ಟುಸಿರೆಳೆಯುತ್ತೇನೆ.

ಒಮ್ಮೆ ಹೀಗಾಯಿತು. ನಾನು ತಾತ್ಕಾಲಿಕ ನೆಲೆಯಲ್ಲಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸಂದರ್ಭ. ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಡೆಯುತ್ತಿದ್ದುವು. ಅವರನ್ನು ಸ್ಪರ್ಧಾ ಸ್ಥಳಗಳಿಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ತಾತ್ಕಾಲಿಕ ಶಿಕ್ಷಕಿಯರಾಗಿದ್ದ ನನಗೆ ಹಾಗೂ ನನ್ನ ಗೆಳತಿಗೆ ಒಪ್ಪಿಸಿದರು. ನಾವೂ ಖುಶಿಯಿಂದಲೇ ಒಪ್ಪಿಕೊಂಡೆವು. ನಮಗಿಂತ ಹೆಚ್ಚೆಂದರೆ ೫-೬ ವರ್ಷ ಚಿಕ್ಕವರಾಗಿದ್ದ ಮಕ್ಕಳೊಂದಿಗೆ ಚೆನ್ನಾಗಿ ಹರಟೆ ಹೊಡೆಯುತ್ತಾ ಪಿಕ್‍ನಿಕ್ ಹೋಗುವ ಅವಕಾಶ ಇದು ಅಂತ.

ಜಿಲ್ಲಾ ಮಟ್ಟದ ಸ್ಪರ್ಧೆಗಳು ಸ್ವಲ್ಪ ದೂರದ ಸ್ಥಳದಲ್ಲಿದ್ದುದರಿಂದ ಬಸ್ಸಲ್ಲಿ ಹೋಗಬೇಕಾಯಿತು. ಬಸ್ಸಿಳಿದದ್ದೇ ರಸ್ತೆ ದಾಟಬೇಕಿತ್ತು. ಯಥಾಪ್ರಕಾರ ನನ್ನ ಕೈ ಪಕ್ಕದಲ್ಲಿದ್ದ ಯೂನಿಫ಼ಾರ್ಮ್ ಹಾಕಿದ್ದ ಹುಡುಗಿಯ ಕೈಯನ್ನ ಹಿಡಿದುಕೊಂಡಿತು. ಯಾಕೋ ಆ ಹುಡುಗಿ ಕೈ ಜಗ್ಗುವುದಕ್ಕೆ ಶುರು ಮಾಡಿದಂತಾಯಿತು. ರಸ್ತೆಯಲ್ಲಿದ್ದ ವಾಹನಗಳನ್ನೇ ಗಮನಿಸುತ್ತ ರಸ್ತೆ ದಾಟಲು ಹವಣಿಸುತ್ತಿದ್ದ ನನಗೆ ಇದರಿಂದ ಸಿಟ್ಟು ಬಂತು. ‘ಅಲ್ಲ, ಈ ಮಕ್ಕಳಿಗೆ ಸ್ವಲ್ಪ ಸಲಿಗೆ ಕೊಟ್ಟರೆ ತಲೆ ಮೇಲೇ ಕೂತುಕೊಂಡು ಬಿಡ್ತಾರೆ. ನಾನಿವಳ ಟೀಚರ್, ಕೈ ಹಿಡಿದುಕೊಂಡರೆ ಕೈ ಜಗ್ಗುತ್ತಾಳಲ್ಲ, ಎಷ್ಟು ಧೈರ್ಯ?!’ ಅಂತ ಮನಸ್ಸಲ್ಲೇ ಬಯ್ಯುತ್ತ ಅವಳನ್ನ ದರದರನೆ ಎಳೆದುಕೊಂಡು ಈ ಕಡೆ ಬಂದು ಬಿಟ್ಟೆ.

ಬಂದ ಮೇಲೆ ನೋಡುವುದೇನು? ನಮ್ಮ ಮಕ್ಕಳೆಲ್ಲ ನಗು ತಾಳಲಾಗದೆ ಇನ್ನೂ ರಸ್ತೆಯ ಆ ಬದಿಯಲ್ಲೆ ನಿಂತು ನನ್ನ ಗೆಳತಿಯೊಂದಿಗೆ ನಗುತ್ತಿದ್ದಾರೆ! ಪಾಪ, ನಾನು ಕರೆದುಕೊಂಡು ಬಂದ (ಎಳೆದುಕೊಂಡು ಬಂದ), ನಮ್ಮ ಮಕ್ಕಳಂತದೇ ಯೂನಿಫ಼ಾರ್ಮ್ ಹಾಕಿದ್ದ ಯಾವುದೋ ಬೇರೆ ಶಾಲೆಯ ಹುಡುಗಿ ನಗು-ಭಯ ಎರಡೂ ಮಿಶ್ರಿತವಾದ ದೃಷ್ಟಿಯಿಂದ ನನ್ನನ್ನೇ ಪಿಳಿಪಿಳಿ ನೋಡುತ್ತಿದ್ದಾಳೆ! ಅತ್ತ ಅವಳ ಟೀಚರ್ ಕೂಡ ನಮ್ಮಿಬ್ಬರನ್ನ ನೋಡಿ ನಗುತ್ತಿದ್ದಾರೆ. ನನಗೋ ಅವಮಾನದ ಜೊತೆಗೇ, ಅವಳೂ ಆ ಸ್ಪರ್ಧೆಗೇ ಹೋಗುವವಳು ಅಂತ ಖಾತ್ರಿಯಾಗಿ, ಅವಳನ್ನ ಪುನಃ ರಸ್ತೆ ದಾಟಿಸಬೇಕಾಗಿಲ್ಲವಲ್ಲ ಎಂಬ ವಿಚಿತ್ರ ಸಮಾಧಾನ!!! ಸ್ಪರ್ಧೆ ಮುಗಿಸಿ ವಾಪಸ್ ಬರಬೇಕಾದರೆ, ಪುನಃ ರಸ್ತೆ ದಾಟಬೇಕಾದಾಗ ಮಕ್ಕಳು ‘ಟೀಚರ್ ಟೀಚರ್, ಕೈ ಹಿಡ್ಕೊಳ್ಳಿ. ರಸ್ತೆ ದಾಟಬೇಕಲ್ಲ?!’ ಅಂತ ಗೋಳು ಹೊಯ್ಕೊಳ್ಳುತ್ತಿದ್ದರೆ, ಅದೇನೋ ಅಂತಾರಲ್ಲ, ‘ಭೂಮಿ ಬಾಯಿ ಬಿಡಬಾರದೇ ಅಂತ ಅನಿಸೋದು’ ಅಂತ. ಹಾಗೇ ಅನಿಸಿತು ನೋಡಿ.

ಹ್ಮ್. ಇಷ್ಟಾದ ಮೇಲೆ ಆ ಕೆಟ್ಟ ಅಭ್ಯಾಸ ಬಿಟ್ಟು ಹೋಗಿರಬಹುದು ಅಂತ ಅಂದುಕೊಂಡಿರೇನೋ.. ಖಂಡಿತ ಇಲ್ಲ ಬಿಡಿ. ಬದಲಿಗೆ ಕೈ ಹಿಡಿಯುವ ಮೊದಲು ಅವರ ಮುಖ ನೋಡುವ ಅಭ್ಯಾಸ ಮಾಡಿಕೊಂಡಿದ್ದೇನೆ!

ಇಂತಿಪ್ಪ ನಾನು ಬೆಂಗಳೂರೆಂಬ ಬೆಂಗಳೂರಿಗೆ ವಲಸೆ ಬರುವಾಗ ಮುಖ್ಯವಾಗಿ ಹೆದರಿದ್ದು ಇದೇ ವಿಷಯಕ್ಕೆ. ಇಲ್ಲಿನ ವಾಹನ ದಟ್ಟಣೆಯ ರಸ್ತೆಯಲ್ಲಿ ಯಾರ ಕೈಯೂ ಹಿಡಿಯದೆ ರಸ್ತೆ ದಾಟುವುದು ಹೇಗಪ್ಪಾ ಎಂಬ ಚಿಂತೆ ನನ್ನನ್ನು ಬಲವಾಗಿಯೇ ಕಾಡುತ್ತಿತ್ತು. ಆಮೇಲೆ ಇಲ್ಲಿನ ಕ್ರಾಸ್ ಓವರ್‍‍ಗಳನ್ನ, ಸಿಗ್ನಲ್‍ಗಳನ್ನ ನೋಡುವಾಗ ಕೊಂಚ ಸಮಾಧಾನವಾಯಿತು. ನನ್ನ ಕಾರ್ಯಕ್ಷೇತ್ರಕ್ಕೆ ಹೋಗುವಾಗ ಕ್ರಾಸ್‍ಓವರ್‍‍ನಲ್ಲೇ ಆರಾಮಾಗಿ ಹೋಗುತ್ತಿದ್ದೆ. ಯಾರ ಹಂಗೂ ಇಲ್ಲದಂತೆ, ಕಾಲಡಿ ಹೋಗುತ್ತಿರುವ ಎಲ್ಲ ವಾಹನಗಳನ್ನು ತುಚ್ಛವಾಗಿ ಕಾಣುತ್ತ ‘ನಾನೇ.... ರಾಜಕುಮಾರಿ’ ಅಂತ ಹಾಡುತ್ತ ಕ್ರಾಸ್‍ಓವರ್‍‍ನಲ್ಲಿ ನಡೆಯಬೇಕಾದರೆ ತುಂಬ ಹೆಮ್ಮೆ ಅನಿಸುತ್ತಿತ್ತು!

ಆದರೆ ಗ್ರಹಚಾರ ನೋಡಿ! ಒಬ್ಬಳೇ ಬರುತ್ತಿದ್ದವಳು ಅಂದೊಮ್ಮೆ ಹೊಸದಾಗಿ ಪರಿಚಿತಳಾದ ಗುಜರಾತಿ ಗೆಳತಿಯೊಂದಿಗೆ ಬರಬೇಕಾಯಿತು. ನಡೆಯುತ್ತಾ ಕ್ರಾಸ್ ಓವರ್ ಹತ್ತಿರ ಬಂದಾಗ ಅದನ್ನು ಹತ್ತಹೊರಟೆ. ನನ್ನನ್ನ ವಾಪಸು ಎಳೆದ ಅವಳು ‘ಹ್ಮ್? ಎಲ್ಲಿಗೆ’ ಅಂತ ಪ್ರಶ್ನಾರ್ಥಕವಾಗಿ ನನ್ನನ್ನ ನೋಡಿದಳು. ‘ರಸ್ತೆ ದಾಟಬೇಕಲ್ಲ?’ ಅಂದೆ. ಅದೇನು ಅಂದೆನೋ ಎಂಬಂತೆ ನನ್ನನ್ನ ಆಪಾದಮಸ್ತಕ ನೋಡಿದ ಹುಡುಗಿ ಪಕಪಕನೆ ನಗಲಾರಂಭಿಸಿದಳು. ‘ಅಲ್ಲ, ಇದೇನು ಮಹಾ ಟ್ರಾಫಿಕ್ ಅಂತ ಹೀಗೆ ಹೇಳ್ತಿದ್ದಿಯಾ? ಈಗ ಪೀಕ್ ಅವರ್ ಕೂಡ ಅಲ್ಲ. ಪಾಪ, ಅಷ್ಟು ಹೆದರ್ತೀಯಾ? ಬಾ ನಾನು ನಿನ್ನ ರಸ್ತೆ ದಾಟಿಸ್ತೀನಿ’ ಅನ್ನುತ್ತಾ, ನಾನು ‘ಅಲ್ಲ, ಭಯ ಏನೂ ಅಲ್ಲ’ ಅಂತ ಗೊಣಗುತ್ತಿದ್ದರೂ ಕೇಳದಂತೆ, ನನ್ನ ಅಭ್ಯಾಸ ಗೊತ್ತೇನೋ ಎಂಬಂತೆ ಕೈ ಹಿಡಿದುಕೊಂಡು ಕರಕೊಂಡು ಹೋದಳು. ಈಗ ದಿನವೂ ಅವಳೊಂದಿಗೇ ಹೋಗಿ ಬರುತ್ತಿದ್ದೇನೆ. ಅಲ್ಲಿಗೆ, ನನ್ನ ಕೈ ಹಿಡಿಯುವ ಅಭ್ಯಾಸ ಇಲ್ಲಿಯೂ ನಿರ್ವಿಘ್ನವಾಗಿ ಮುಂದುವರಿಯುತ್ತಿದೆ...

ಆದರೂ ನಿಜವಾಗಲೂ ನೀವೀಗ ಅಂದುಕೊಂಡಿರುವಂತೆ ನನಗೆ ರಸ್ತೆ ದಾಟುವಾಗ ಭಯವೇನೂ ಆಗುವುದಿಲ್ಲ. ನಂಬಿ!!

ಬರೆಯುವ ಮುನ್ನ...

ಪ್ರಾಮಾಣಿಕವಾಗಿ ಒಪ್ಪಿಕೊಂಡು ಬಿಡುತ್ತೇನೆ, ನಾನು ಖಂಡಿತಾ ಬರಹಗಾರ್ತಿ ಅಲ್ಲ. ಆದರೆ ಬರೆಯಬೇಕೆಂಬ ಆಸೆ ಚಿಕ್ಕಂದಿನಿಂದಲೂ ನನಗೆ ಬಲವಾಗಿ ಇದೆ. ಬಾಲ್ಯದಿಂದಲೂ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವಿರುವ ನನಗೆ, ಅವನ್ನು ಓದುವಾಗೆಲ್ಲ ನಾನೂ ಮುಂದೆ ಲೇಖಕಿಯಾಗಬೇಕು ಅನಿಸುತ್ತಿತ್ತು. ಬರೆಯಲು ಪ್ರಯತ್ನ ಪಟ್ಟುದೂ ಇತ್ತು. ಆದರೆ ಬರೆದಾದ ಮೇಲೆ ಓದ ಹೋದರೆ ಅವು ನನಗೇ ರುಚಿಸದೆ, ಬೇರೆಯವರಿಗೆ ತೋರಿಸಲು ಕಿಂಚಿತ್ತೂ ಧೈರ್ಯ ಬಾರದೆ ನೇರ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದವು. ಆಮೇಲೆ ಆ ರೀತಿ ಬರೆಯುವ ಪ್ರಯತ್ನ ಮಾಡಲೂ ಧೈರ್ಯ ಬರದಾಯಿತು. ಈಗ ಬ್ಲಾಗ್ ಜಗತ್ತಿನ ಬರಹಗಳನ್ನೆಲ್ಲ ನೋಡುವಾಗ ಮತ್ತೆ ಆ ತುಡಿತ ಹೆಚ್ಚುತ್ತಿದೆ. ಹಾಗಾಗಿ ಬ್ಲಾಗ್ ಆರಂಭಿಸಿ ಆರಂಭ ಶೂರತ್ವವನ್ನೇನೋ ತೋರಿಸಿದೆ. ಆದರೆ, ಮತ್ತೆ ಅಳುಕು ಕಾಡತೊಡಗಿತು. ನನ್ನ ಬರಹಗಳನ್ನು ಯಾರಾದರೂ ಮೆಚ್ಚಬಹುದೇ? ಮೆಚ್ಚುವುದಿರಲಿ, ಓದಿ ಎಂಥಾ ಬಾಲಿಶ ಬರಹಗಳು ಅಂತ ಬಯ್ದು ಬಿಟ್ಟರೆ? ಅಂತೆಲ್ಲ ಮನಸ್ಸು ಪ್ರಶ್ನೆಗಳನ್ನು ಹಾಕುವುದಕ್ಕೆ ಪ್ರಾರಂಭ ಮಾಡಿತು. ಈಗ ತುಂಬ ಕಷ್ಟ ಪಟ್ಟು ಅದನ್ನು ಕೊಂಚ ಸಮಾಧಾನಿಸಿ ಬರೆಯುವ ಪ್ರಯತ್ನಕ್ಕೆ ಕೈ ಹಾಕುತ್ತಿದ್ದೇನೆ. ಏನೇ ಆಗಲಿ, ಈ ಬರಹಗಳನ್ನು ಓದಿ, ವಿಮರ್ಶಿಸಿ, ಕಟು ಟೀಕೆ ಮಾಡಿಯಾದರೂ ನೀವು ನನ್ನನ್ನು ಪ್ರೋತ್ಸಾಹಿಸುತ್ತೀರಿ, ಮತ್ತದು ನನ್ನನ್ನು ನಾನು ತಿದ್ದಿಕೊಳ್ಳಲು ಸಹಕರಿಸುತ್ತದೆ ಎಂಬ ಆತ್ಮವಿಶ್ವಾಸ ನನ್ನದು.

ಪ್ರಾರಂಭಕ್ಕೆ ಲಘು ಹರಟೆಯೇ ಒಳ್ಳೆಯದು ಅಂತ ಅನಿಸಿ ಅದನ್ನೇ ನಿಮ್ಮ ಮುಂದಿಡುತ್ತಿದ್ದೇನೆ. ಖಂಡಿತಾ ಓದಿ ನೋಡಿ (ಬೈದಾದರೂ ಸರಿ!) ಕಮೆಂಟಿಸುತ್ತೀರಲ್ಲ??