Thursday, April 17, 2008

ಹೊಸ ಹಾದಿಯ ಭಯ


ಈಗ ದಿನದ ಸುಮಾರು ೭-೮ ಗಂಟೆಯಾದರೂ ನನ್ನ ಸಂಗಾತಿಯಾಗುವ ಈ ಕಂಪ್ಯೂಟರ್ ಕೇವಲ ಕೆಲವೇ ವರ್ಷಗಳ ಹಿಂದೆ ತೀರಾ ‘ಅಪರಿಚಿತ’ ಅನ್ನಿಸುತ್ತಿದ್ದುದು ಸುಳ್ಳಲ್ಲ. ‘ಇಲಿ’ ಹಿಡಿಯಲು ಒದ್ದಾಡುತ್ತಿದ್ದುದು, ಕೀಬೋರ್ಡ್‍ನಲ್ಲಿ ಅಕ್ಷರಗಳಿಗಾಗಿ ಹುಡುಕುತ್ತಿದ್ದುದು, ಯಾವ ಕೀ ಒತ್ತಿದರೆ ಏನಾಗುತ್ತದೋ ಅಂತ ಭಯ ಪಡುತ್ತಿದ್ದುದು, ಅದು ‘ಢಣ್’ ಅಂತ ಎರರ್ ತೋರಿಸಿದ ಕೂಡಲೆ ಸಿಕ್ಕಾಪಟ್ಟೆ ಹೆದರಿ ಎಲ್ಲ ಕ್ಲೋಸ್ ಮಾಡುತ್ತಿದ್ದುದು... ಎಲ್ಲ ಈಗ ಎಣಿಸಿಕೊಂಡರೆ ತುಂಬ ನಗು ಬರುತ್ತದೆ, ಖುಶಿಯಾಗುತ್ತದೆ. ಜೊತೆಗೆ ಸಧ್ಯ ಆ ಹಂತದಿಂದ ಇಲ್ಲಿವರೆಗಾದರೂ ಬಂದಿದ್ದೇನಲ್ಲ ಅಂತ ಒಂಥರಾ ಹೆಮ್ಮೆಯೂ ಆಗುತ್ತದೆ! ಕಂಪ್ಯೂಟರ್ ಅಂತಲ್ಲ, ಯಾವುದನ್ನೇ ಆದರೂ ಹೊಸದಾಗಿ ಕಲಿಯುವಾಗ ಉಂಟಾಗುವ ಭಯ, ಸಂದೇಹಗಳು, ನಾವು ಮಾಡುವ ‘ಸಿಲ್ಲಿ’ ತಪ್ಪುಗಳನ್ನೆಲ್ಲ ಕಲಿತಾದ ಮೇಲೆ ನೆನೆಸಿಕೊಂಡರೆ ಆಗುವ ಖುಶಿಯೇ ಬೇರೆ. ಆ ತರ ನನ್ನ ಕೆಲವು ಅನುಭವಗಳನ್ನು ಇಲ್ಲಿ ಬರೆದಿದ್ದೇನೆ. ನೀವೂ ನಿಮ್ಮದನ್ನು ಹಂಚಿಕೊಂಡರೆ ಬಡಜೀವ ತುಂಬ ಸಂತೋಷ ಪಡುತ್ತದೆ!

* * *

ನನಗೆ ಈ-ಮೇಲ್ ನ ಪರಿಚಯ ಮಾಡಿಸಿದ್ದು ನನ್ನ ಗೆಳತಿ. ಆಗಿನ್ನೂ ನನಗೆ ಕಂಪ್ಯೂಟರೇ ಹೊಸತು. ಅವಳು ನನ್ನನ್ನ ಸೈಬರ್‍‍ಗೆ ಕರಕೊಂಡು ಹೋಗಿ ತಾನೇ ನನ್ನ ವಿವರಗಳನ್ನೆಲ್ಲ ಎಂಟ್ರಿ ಮಾಡಿ ಈ-ಮೇಲ್ ಐಡಿಯನ್ನೂ, ಪಾಸ್‍ವರ್ಡನ್ನೂ ಅವಳೇ ಯೋಚಿಸಿ ನನಗೊಂದು ಯಾಹೂ ಐಡಿ ಕ್ರಿಯೇಟ್ ಮಾಡಿಕೊಟ್ಟಳು. ಅದಾದ ನಂತರ ಒಂದೆರಡು ಬಾರಿ ಅವಳೊಂದಿಗೇ ಹೋಗಿ ನನ್ನ ಎಕೌಂಟನ್ನು ತುಂಬ ಅಭಿಮಾನದಿಂದ ಓಪನ್ ಮಾಡಿ ಖಾಲಿ ಇನ್‍ಬಾಕ್ಸನ್ನು ನೋಡಿ ಖುಶಿಪಟ್ಟು ಬರುತ್ತಿದ್ದೆ. ಆಮೇಲೆ ನಮ್ಮ ಮನೆಗೂ ಕಂಪ್ಯೂಟರ್ ಬಂತು, ಇಂಟರ್ನೆಟ್ ಕೂಡ ಬಂತು ಕಾಲಾನುಕ್ರಮದಲ್ಲಿ. ರಾತ್ರಿ ಹೊತ್ತು ನಮ್ಮಣ್ಣ ಇಂಟರ್ನೆಟ್ ಓಪನ್ ಮಾಡಿ ಅದೇನೇನೋ ಪಟಪಟನೆ ಸರ್ಚ್ ಮಾಡುತ್ತಿದ್ದರೆ ನನಗೆ ‘ಅಬ್ಬಾ!, ಇವನಿಗೆ ಏನೆಲ್ಲ ಗೊತ್ತು... ‘ಸರ್ವಜ್ಞ ’ನೇ ಸರಿ!’ ಅನಿಸುತ್ತಿತ್ತು. ಸುಮ್ಮನೆ ಅವನ ಹಿಂದೆ ಕೂತು ಅವ ಮಾಡುತ್ತಿದ್ದುದನ್ನೆಲ್ಲ ನೋಡುತ್ತಿದ್ದೆ. ಒಮ್ಮೆ ಹೀಗೇ ಅವನ ಕೆಲಸವಾದ ಮೇಲೆ ನನ್ನ ಯಾಹೂ ಅಕೌಂಟ್‍ ಓಪನ್ ಮಾಡುವ ಮನಸಾಯ್ತು. ಅಣ್ಣನ ಬಳಿ ಹೇಳಿದರೆ, ‘ಆಯ್ತು, ನೋಡಿ ಶಟ್‍ಡೌನ್ ಮಾಡು’ ಅಂತ ಹೇಳಿ ಹೋಗಿ ಮಲಗಿಯೇ ಬಿಟ್ಟ! ಸರಿ, ಇನ್ನೇನು ಮಾಡುವುದು ಅಂತ ನಾನು ನನ್ನ ಗೆಳತಿ ಹೇಳಿದ್ದನ್ನೆಲ್ಲ ನೆನಪಿಸಿಕೊಂಡು ಹೆದರಿ ಹೆದರಿ ಇನ್‍ಬಾಕ್ಸ್ ಓಪನ್ ಮಾಡಿದೆ. ನೋಡಿದರೆ ಒಂದು ಮೆಸ್ಸೇಜ್ ಇದೆ! ಅಬ್ಬಾ! ಆ ಖುಶಿಯನ್ನು ಪದಗಳಲ್ಲಿ ವರ್ಣಿಸುವುದೇನು ಸಾಧ್ಯವೇ?! ನನ್ನ ಗೆಳತಿಯೇ ಅದನ್ನ ಕಳಿಸಿದ್ದು ಅಂತ ಅವಳ ಹೆಸರನ್ನೂ ತೋರಿಸುತ್ತಿದೆ ಅದು. ಸರಿ, ಏನು ಬರೆದಿದ್ದಾಳೋ ನೋಡೋಣ ಅಂತ ಅವಳ ಹೆಸರ ಮೇಲೆ ಕ್ಲಿಕ್ ಮಾಡಿದರೆ ಏನೂ ಓಪನ್ ಆಗುತ್ತಿಲ್ಲ. ಸುಮಾರು ಹೊತ್ತು ಏನೇನೋ ಮಾಡಿ ತಿಣುಕಾಡಿದರೂ ಆಗುತ್ತಿಲ್ಲ. ಮೆಸ್ಸೇಜ್ ಓದುವುದು ಹೇಗೆ ಅಂತ ಅವಳು ಹೇಳಿಕೊಟ್ಟಿದ್ದರೂ ನನಗದು ಮರೆತುಹೋಗಿತ್ತು. ಈ ಅಣ್ಣ ಬೇರೆ ಮಲಗಿದ್ದಾನೆ. ಎಬ್ಬಿಸಿ ಕೇಳಿದರೆ ‘ಇಷ್ಟೂ ಗೊತ್ತಿಲ್ಲವಾ ನಿನಗೆ?’ ಅಂತ ಕಾಲೆಳೆಯುತ್ತಾನೆ ಖಂಡಿತ. ಬೇಡ, ನಾನೇ ಏನಾದರೂ ಮಾಡಬೇಕು ಅಂತ ತೀರ್ಮಾನಿಸಿ ಮತ್ತಷ್ಟು ಒದ್ದಾಡಿದೆ. ಊಹ್ಞೂ, ಜಗ್ಗುತ್ತಿಲ್ಲ. ಅಷ್ಟರಲ್ಲಿ ಅಲ್ಲೆಲ್ಲೋ ‘ಹೆಲ್ಪ್’ ಅಂತ ಕಾಣಿಸಿತು. ಅದನ್ನ ಕ್ಲಿಕ್ ಮಾಡುವುದೋ, ಬೇಡವೋ ಅಂತ ದ್ವಂದ್ವದಲ್ಲಿ ಬಿದ್ದು, ಕೊನೆಗೆ ಆಗಿದ್ದಾಗಲಿ ಅಂತ ಒತ್ತಿದೆ. ಅದರಲ್ಲೂ ಹುಡುಕಿ ಹುಡುಕಿ ಕೊನೆಗೆ ‘click on the subject to read the message' ಅಂತ ಓದಿಕೊಂಡು ಅದರಂತೆ ಮೆಸ್ಸೇಜ್ ಓದಿದಾಗ ನನಗೆ ಜಗತ್ತನ್ನೇ ಗೆದ್ದ ಸಂತೋಷ! ಮೆಸ್ಸೇಜ್ ಇದ್ದಿದ್ದಾದರೂ ಏನು? hi manga... ಅಂತೇನೋ ಅಷ್ಟೇ! ಆದರೆ ಹೊಸತನ್ನು ನಾನೇ ಹುಡುಕಿ ಕಲಿತ ಸಂತೋಷದಲ್ಲಿ ನನಗದೆಲ್ಲ ಅಷ್ಟು ಮುಖ್ಯವಾಗಿರಲಿಲ್ಲ!

* * *

ಇನ್ನು ಅಡಿಗೆಮನೆ ವಿಷಯಕ್ಕೆ ಬಂದರೆ, ಅಬ್ಬಬ್ಬಾ! ಅಲ್ಲಿ ಸಾವಿರ ಗೊಂದಲಗಳು, ಸಂದೇಹಗಳು. ಏನು ಹಾಕಬೇಕು? ಎಷ್ಟು ಹಾಕಬೇಕು ಎಂಬ ಪ್ರಶ್ನೆಗಳ ಜೊತೆಗೆ, ಯಾವಾಗ, ಹೇಗೆ ಹಾಕಬೇಕು ಅನ್ನುವುದೂ ಕೂಡ ದೊಡ್ಡ ಕನ್‍ಫ್ಯೂಷನ್ ಇಲ್ಲಿ. ನನಗೆ ಮೊದ ಮೊದಲು ಬರುತ್ತಿದ್ದ ಸಂದೇಹಗಳೆಂದರೆ ಯಾವುದನ್ನೆಲ್ಲ ತೊಳೆದು ಬೇಯಲಿಕ್ಕೆ ಹಾಕಬೇಕು (ಉದಾಹರಣೆಗೆ: ಬೇಳೆ, ಅಕ್ಕಿ), ಯಾವುದನ್ನು ಹಾಗೇ ಹಾಕಬಹುದು (ಉದಾಹರಣೆಗೆ: ರವೆ, ಹೆಸರುಕಾಳು ಇತ್ಯಾದಿ) ಅಂತ. ಇದರಲ್ಲಿ ಕೆಲವು ಎರಡೂ ಕೆಟಗರಿಗಳಿಗೆ ಸೇರುತ್ತವಾದ್ದರಿಂದ (ಉದಾಹರಣೆಗೆ: ಅವಲಕ್ಕಿ) ಪಾಪ, ನನ್ನಮ್ಮ ನನಗೆ ಅರ್ಥ ಮಾಡಿಸೋಕೆ ತುಂಬ ಕಷ್ಟ ಪಟ್ಟಿದ್ದಂತೂ ಸತ್ಯ!

ಅದೂ ಅಲ್ಲದೇ, ಅವಳು ಹೇಳಿಕೊಡುವಾಗೆಲ್ಲ ಬಾರದ ಸಂದೇಹಗಳು ಅವಳ ಅನುಪಸ್ಥಿತಿಯಲ್ಲಿ ಹಾಳಾದ್ದು ಧುತ್ತಂತ ಬಂದು ಬಿಡುತ್ತವೆ. ಒಗ್ಗರಣೆಗೆ ಎಣ್ಣೆ ಹಾಕುವುದೋ, ತುಪ್ಪವೋ.. ಹುರಿದು ಅರೆಯಬೇಕೋ, ಅರೆದು ಹುರಿಯಬೇಕೋ ಅಂತೆಲ್ಲ ಗೊಂದಲಕ್ಕೆ ಬಿದ್ದು, ನನ್ನದೇ ತೀರ್ಮಾನ ಮಾಡಿ ಏನೋ ಒಂದು ಮಾಡಿ ಕೊನೆಗದು ‘ಮಾಡಿದ್ದುಣ್ಣೋ ಮಹಾರಾಯ’ ಎಂಬಂತಾದದ್ದು ಅದೆಷ್ಟು ಸಲವೋ!

ಹೊಸ ರುಚಿ ಮಾಡುವಾಗಂತೂ ಕೇಳುವುದೇ ಬೇಡ, ಆ ರೆಸಿಪಿ ನನ್ನ ಕಣ್ಣ ಮುಂದೇ ಇರಬೇಕು, ಎಲ್ಲ ರೆಡಿ ಆಗುವವರೆಗೆ. ಅದರಲ್ಲಿದ್ದ ವಿವರಣೆಗಳನ್ನೆಲ್ಲ ಚಾಚೂ ತಪ್ಪದೆ ಪಾಲಿಸಿ ತಯಾರಿಸಿದ ಮೇಲೆ ಅದನ್ನ ನನ್ನ ‘ಬಲಿಪಶುಗಳು’ ಟೇಸ್ಟ್ ಮಾಡುವಾಗ ಒಳಗೊಳಗೇ ಹೆದರಿಕೆಯಾಗುತ್ತಿರುತ್ತದೆ. ಓರೆಗಣ್ಣಿನಿಂದ ತಿನ್ನುವವರ ಮುಖವನ್ನೇ ನೋಡುತ್ತ ಹೇಗಾಗಿರಬಹುದು ಅನ್ನುವ ಕಲ್ಪನೆ ಮಾಡುತ್ತೇನೆ. ಅವರೇನಾದರೂ ನನ್ನನ್ನು ನೋಡುತ್ತ ಪೆಚ್ಚುಪೆಚ್ಚಾಗಿ ನಕ್ಕರೆ ಎಲ್ಲೋ ಏನೋ ಎಡವಟ್ಟು ಖಂಡಿತ ಆಗಿದೆ ಅಂತ ನನಗೆ ಕನ್ಫರ್ಮ್ ಆಗುತ್ತೆ!

ನನ್ನ ಗೆಳತಿಯೊಬ್ಬಳು ಪಾಪ, ಮೊದಲ ಬಾರಿ ಅನ್ನ ಮಾಡುವಾಗ, ಅಕ್ಕಿಯನ್ನ ತೊಳೆಯದೇ, ನೀರೂ ಹಾಕದೇ ಬರಿಯ ಅಕ್ಕಿಯನ್ನು ಕುಕ್ಕರ್ ಒಳಗೆ ಇಟ್ಟು ಬೇಯಿಸಿದ್ದಳಂತೆ! ಅನ್ನ(?) ಹೇಗಾಗಿದ್ದಿರಬಹುದು ಅನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು.

* * *

ಟೂ ವೀಲರೋ, ಕಾರೋ ಕಲಿಯುವಾಗ ಖಂಡಿತ ನೀವೂ ನನ್ನ ತರ ಗೊಂದಲಕ್ಕೆ ಬಿದ್ದಿರುತ್ತೀರಿ ಅನ್ನೋದು ನನ್ನ ನಂಬಿಕೆ. ಸ್ಟಾರ್ಟ್ ಯಾವುದು, ಬ್ರೇಕ್ ಯಾವುದು, ಎಕ್ಸ್‍ಲರೇಟರ್ ಯಾವುದು ಅಂತೆಲ್ಲ ಅರೆದು ಕುಡಿದು, ನಾವು ಮೊದಲ ಬಾರಿ ರಸ್ತೆಯಲ್ಲಿ ಗಾಡಿ ತೆಗೆದುಕೊಂಡು ಹೋಗುವಾಗ ಅದೇನಾಗುತ್ತದೋ ಈ ಗಾಡಿಗೆ?! ಎದುರಲ್ಲಿ ತಮ್ಮ ಪಾಡಿಗೆ ಬರುತ್ತಿರುವವರನ್ನೆಲ್ಲ ತನ್ನ ಆಜನ್ಮವೈರಿಗಳೆಂದು ತೀರ್ಮಾನಿಸಿ, ಅವರನ್ನ ಗುದ್ದಿಯೇ ಸಿದ್ಧ ಅಂತ ರಸ್ತೆಯ ಈ ಬದಿ ಅಷ್ಟು ಜಾಗವಿದ್ದರೂ ರಾಂಗ್ ಸೈಡ್‍ಗೇ ಓಡುತ್ತಿರುತ್ತದೆ. ಗಾಡಿ ಅಷ್ಟೆಲ್ಲ ಹುಚ್ಚಾಪಟ್ಟೆ ಆಡುತ್ತಿರುವಾಗ ಅದರ ಮೇಲೆ ಆಸೀನಳಾಗಿ ಜವಾಬ್ದಾರಿ ಹೊತ್ತ ನಾನು ಸುಮ್ಮನಿರಲು ಸಾಧ್ಯವೇ? ತಕ್ಷಣಕ್ಕೆ ಹೊಳೆಯುವ ಉಪಾಯ ಬ್ರೇಕ್ ಹಾಕಿ ಗಾಡಿ ನಿಲ್ಲಿಸುವುದೊಂದೇ. ಆದರೆ ಆ ಟೆನ್ಷನಲ್ಲಿ ‘ಬ್ರೇಕ್ ಹಾಕುವಾಗ ಎಕ್ಸ್‍ಲರೇಟರ್ ಕೊಡಬಾರದು’ ಅಂತ ಕಲಿಸುವಾಗ ಹೇಳಿಕೊಟ್ಟ ಮೂಲ ಪಾಠ ಗಾಳಿಗೆ ತೂರಿಹೋಗಿರುತ್ತದೆ. ಪರಿಣಾಮ.......

* * *

ಇನ್ನು ಕ್ರೀಡೆಯ ವಿಷಯಕ್ಕೆ ಬಂದರೆ, ಆಡುವುದಕ್ಕಿಂತ ನೋಡುವುದು ಜಾಸ್ತಿ ಅನ್ನೋ ಜಾತಿಯವಳು ನಾನು. ನೋಡುವಾಗಲೂ ಸಂದೇಹಗಳು ಬಂದೇ ಬರುತ್ತವೆ. ಟೆನಿಸ್, ಕ್ರಿಕೆಟ್, ಎಫ್ ೧ ಇತ್ಯಾದಿಗಳ ರೂಲ್ಸುಗಳನ್ನ ನನಗೆ ಅರ್ಥ ಮಾಡಿಸಲಿಕ್ಕೆ ಸಿಕ್ಕಾಪಟ್ಟೆ ಬುದ್ಧಿ ಖರ್ಚು ಮಾಡಿದ್ದಾರೆ ನನ್ನ ಅಣ್ಣಂದಿರು. ಇಷ್ಟಾಗಿಯೂ, ಕ್ರಿಕೆಟಲ್ಲಿ LBW ಔಟನ್ನು ಅದು ಹೇಗೆ ತೀರ್ಮಾನ ಮಾಡುತ್ತಾರೋ ನನಗಿನ್ನೂ ಅರ್ಥವಾಗಿಲ್ಲ!

ಕ್ರಿಕೆಟ್‍ನ ನೋಬಾಲ್, ವೈಡ್‍ಬಾಲ್ ಇತ್ಯಾದಿಗಳ ಬಗ್ಗೆ ತೀರ ಕನ್‍ಫ್ಯೂಸ್ ಆಗುತ್ತಿದ್ದ ಸಮಯದಲ್ಲಿ ನನ್ನ ಪ್ರಶ್ನೆಯೊಂದು ಹೀಗಿತ್ತು: ವೈಡ್‍ಬಾಲ್‍ಗೆ ಬೋಲ್ಡ್ ಔಟ್ ಆದರೆ, ಔಟೋ ನಾಟೌಟೋ?!!! ಮಿಲಿಯನ್ ಡಾಲರ್ ಪ್ರಶ್ನೆ! ಉತ್ತರಿಸಲು ನೀವೂ ಪ್ರಯತ್ನ ಪಡಬಹುದು.

* * *

ನನ್ನ ಅಜ್ಞಾನದಿಂದಾಗುವ ತಪ್ಪುಗಳಿಂದ ಇತರರಿಗೆ ತೊಂದರೆಯಾಗಿದೆಯೇ ಅಂತ ಕೇಳ್ತೀರಾದರೆ ಅಂಥವು ತುಂಬ ಇವೆ ಬಿಡಿ! ಕೆಲವು ಸ್ಯಾಂಪಲ್‍ಗಳನ್ನ ನೋಡಿ:

ಒಮ್ಮೆ ಉಡುಪಿಯ ಕಲ್ಸಂಕ ಬಸ್ ಸ್ಟ್ಯಾಂಡಿನ ಬಳಿ ನಡೆದುಕೊಂಡು ಬರುತ್ತಿದ್ದಾಗ ವ್ಯಾನಲ್ಲಿ ಬರುತ್ತಿದ್ದವರು ಯಾರೋ ಗಾಡಿ ನಿಲ್ಲಿಸಿ, ಮಲ್ಪೆ ಬೀಚಿಗೆ ಹೋಗುವ ದಾರಿ ಕೇಳಿದರು. ಜೀವಮಾನದಲ್ಲಿ ನನ್ನ ಬಳಿ ರೂಟ್ ಕೇಳಿದ ಮೊದಲಿಗರಿರಬೇಕು ಅವರು! ನನ್ನ ಬಳಿ ಕೇಳದೆ, ಬರುತ್ತಿದ್ದ ದಾರಿಯಲ್ಲೇ ಸೀದಾ ೨-೩ ಕಿ.ಮೀ. ಮುಂದೆ ಹೋಗಿದ್ದರೆ ಸೀದಾ ಮಲ್ಪೆ ಬೀಚಿಗೇ ಹೋಗಿ ಬೀಳುತ್ತಿದ್ದರು ಪಾಪ, ನನ್ನ ಬಳಿ ಕೇಳಿ ಸಿಕ್ಕಿ ಹಾಕಿಕೊಂಡರು. ನನಗೆ ಆ ರಾಜಮಾರ್ಗದ ಬಗ್ಗೆ ಆವಾಗ ದೇವರಾಣೆ ಗೊತ್ತಿರಲಿಲ್ಲ. ನಾನು ಸ್ಟೈಲಾಗಿ, ಭಾರೀ ಉಪಕಾರ ಮಾಡುತ್ತಿರುವವರ ಪೋಸಿನಲ್ಲಿ ಅವರಿಗೆ ‘ರೈಟ್ ಟರ್ನ್’ ಅಂದೆ. ಅದರ ಮೂಲಕವೂ ಹೋಗಬಹುದಿತ್ತಾದರೂ ಅದು ಸುತ್ತು ಬಳಸು ದಾರಿ. ಮೇಲಾಗಿ ರಸ್ತೆ ಚೆನ್ನಾಗಿಲ್ಲದ, ಕಿಷ್ಕಿಂಧೆಯಂತ ಇಕ್ಕಟ್ಟಿನ ದಾರಿ. ೬-೭ ಕಿ.ಮೀ. ಆದರೂ ಬೇಕು ಅಲ್ಲಿಂದ ಮಲ್ಪೆಗೆ! ಆ ರಸ್ತೆಯಲ್ಲಿ ಆ ದೊಡ್ಡ ವಾಹನವನ್ನು ಅದು ಹೇಗೆ ತೆಗೆದುಕೊಂಡು ಹೋದರೋ ಪಾಪ! ಒಟ್ಟಾರೆ, ಅವರಿಗೆ ಸತ್ಯದ ಅರಿವಾಗಿದ್ದರೆ ನನ್ನ ಎಷ್ಟು ಬೈದುಕೊಂಡಿರುತ್ತಾರೋ, ಇನ್ಯಾವತ್ತೂ ಹುಡುಗಿಯರ ಬಳಿ ರೂಟ್ ಕೇಳುವ ಸಾಹಸ ಮಾಡಲಾರರು ಅಂತ ಅನಿಸಿತು ಅಮೇಲೆ ನಂಗೆ.

ಪ್ರೈಮರಿ ಸ್ಕೂಲಲ್ಲಿ ಇದ್ದಾಗ ಗೆಳತಿಯೊಬ್ಬಳು ಇನ್ನೊಬ್ಬಳ ದೂರುಗಳೊಂದಿಷ್ಟನ್ನು ನನ್ನ ಬಳಿ ಊದಿದಳು. ‘ಚಾಡಿ ಹೇಳಬಾರದು’ ಅನ್ನೋ ಕನಿಷ್ಟ ಜ್ಞಾನವೂ ಆಗ ಇಲ್ಲದಿದ್ದ ನಾನು (ಈಗ ಖಂಡಿತ ಇದೆ. ನನ್ನ ನಂಬಿ, ಪ್ಲೀಸ್) ಆ ‘ಇನ್ನೊಬ್ಬಳ’ ಬಳಿ ಹೋಗಿ ಚಾಚೂ ತಪ್ಪದೆ ವರದಿ ಒಪ್ಪಿಸಿ, ಅವರಿಬ್ಬರ ನಡುವೆ ಕಲಹಕ್ಕೆ ಕಾರಣಳಾಗಿ ‘ನಾರದ’ ಅನ್ನಿಸಿಕೊಂಡೆ.

ಇನ್ನು, ಪಿಯುಸಿಯಲ್ಲಿದ್ದಾಗ, ನನ್ನ ಗೆಳತಿಯೊಬ್ಬಳಿಗೆ ‘ಮದ್ರಾಸ್ ಐ’ (ಕೆಂಗಣ್ಣು) ಪ್ರಾರಂಭವಾಯ್ತು. ಕೆಂಗಣ್ಣು ಇರುವವರ ಕಣ್ಣನ್ನು ನೋಡಿದ ಕೂಡಲೆ ಆ ಕ್ರಿಮಿ ಅಲ್ಲಿಂದ 'ತುಪುಕ್' ಅಂತ ಹಾರಿ ನಮ್ಮ ಕಣ್ಣಿಗೆ ಬರುತ್ತದೆ ಅಂತ ನಂಬಿಕೊಂಡಿದ್ದ ನಾವು ಅವಳನ್ನು ದೂರ ಇಟ್ಟೆವು. ಪಾಪ, ದಿನವೂ ನಮ್ಮ ಜತೆಗೇ ಓಡಾಡುವ ಹುಡುಗಿ. ಎಷ್ಟೆಂದು ಒಬ್ಬಳೇ ಇದ್ದಾಳು? ನಾವು avoid ಮಾಡಿದರೂ ತಿಳಿಯದಂತೆ ನಮ್ಮೆದುರೇ ಬರತೊಡಗಿದಳು. ಅಷ್ಟರಲ್ಲಿ ನಾನು ‘ನಮ್ಮೆದುರು ಬಂದು ಹಾಗೆ ನೋಡ್ಬೇಡ ಮಾರಾಯ್ತಿ’ ಅಂತೇನೋ ಸ್ವಲ್ಪ ಖಾರವಾಗಿಯೇ ಹೇಳಿಬಿಟ್ಟೆ. ಆಗೇನೂ ಹೇಳದ ಅವಳು, ೨-೩ ದಿನ ಬಿಟ್ಟು, ‘ನಾನು ನಿನ್ನ ತುಂಬ ಹಚ್ಚಿಕೊಂಡಿದ್ದೆ. ಅವರೆಲ್ಲ ಏನು ಹೇಳಿದರೂ ನಂಗೆ ಬೇಜಾರಾಗ್ಲಿಲ್ಲ. ನೀನೂ ಹೇಳಿದಿಯಲ್ಲ ನನ್ನ ನೋಡ್ಬೇಡ ಅಂತ. ತುಂಬ ಬೇಜಾರಾಯ್ತು’ ಅನ್ನುತ್ತ ಅತ್ತೇಬಿಟ್ಟಳು. ನನಗೆ ಯಾವ ರೀತಿ ಅವಳಿಗೆ ಸಾಂತ್ವನ ಹೇಳಬೇಕೋ ತಿಳಿಯಲಿಲ್ಲ. ‘ಸಾರಿ, ಹಾಗಲ್ಲ ನಾನು ಹೇಳಿದ್ದು’ ಅಂತೇನೋ ವ್ಯರ್ಥ ಸಮಜಾಯಿಷಿ ನೀಡತೊಡಗಿದೆ. ‘ಕೆಂಗಣ್ಣಿರುವವರ ಕಣ್ಣನ್ನು ನೋಡುವುದರಿಂದ ಅದು ಹರಡುವುದಿಲ್ಲ, ಬದಲಿಗೆ ಅವರ ಕಣ್ಣು ತಾಕಿದ ವಸ್ತುಗಳನ್ನು ನಾವು ನಮ್ಮ ಕಣ್ಣಿಗೆ ತಾಕಿಸಿದರೆ ಮಾತ್ರ ಬರುವ ಸಾಧ್ಯತೆ ಇದೆ’ ಎನ್ನುವ ಸತ್ಯ ನನಗೆ ಅರಿವಾಗುವ ವೇಳೆಗೆ ನಮ್ಮಿಬ್ಬರ ಜೀವನದ ಹಾದಿಯೇ ಬದಲಿಸಿ ನಾವು ಬೇರಾಗಿದ್ದರಿಂದ ಅವಳಲ್ಲಿ ಸರಿಯಾಗಿ ಕ್ಷಮೆ ಕೇಳಲೂ ಸಾಧ್ಯವಾಗಿಲ್ಲ ಅನ್ನುವ ಕೊರಗು ನನಗಿನ್ನೂ ಇದೆ. ಪ್ರಾಯಶಃ ನನ್ನ ಅಜ್ಞಾನದಿಂದಾದ ದೊಡ್ಡ ಪ್ರಮಾದಗಳಲ್ಲಿ ಇದೊಂದು ಅನಿಸುತ್ತದೆ ನನಗೆ.

* * *

ಅದೆಲ್ಲ ಏನೇ ಇರಲಿ. ತಪ್ಪು ಮಾಡದೆ, ಸಂದೇಹಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡದೆ ಮನುಷ್ಯ ಏನೂ ಹೊಸತನ್ನು ಕಲಿಯಲಾರ ಅನ್ನುವುದು ಮಾತ್ರ ಸಾರ್ವಕಾಲಿಕ ಸತ್ಯ.