Thursday, November 6, 2008

ಕಾಯಕವೇ ಕೈಲಾಸ

ಚಿಕ್ಕಂದಿನಿಂದಲೂ ನನಗೆ ದಿನವೂ ಕೆಲಸಕ್ಕೆ ಹೋಗುವವರನ್ನು ನೋಡುತ್ತಿದ್ದಾಗೆಲ್ಲ ಅನಿಸುತ್ತಿದ್ದುದು ಒಂದೇ - ನಾನೂ ಬೇಗ ಬೇಗ ಓದಿ ಮುಗಿಸಿ ಕೆಲಸಕ್ಕೆ ಸೇರಬೇಕು, ಆಮೇಲೆ ಈ ಶಾಲೆ, ಕಾಲೇಜು, ಓದೋದು - ಬರೆಯೋದು, ಮೇಷ್ಟ್ರ ಹತ್ರ ಕೊರೆಸಿಕೊಳ್ಳೋದು, ಬೈಸಿಕೊಳ್ಳೋದು, ತಿಂಗಳಿಗೊಮ್ಮೆ ಬರೋ ಪರೀಕ್ಷೆಗಳು... ಇವುಗಳ ಜಂಜಾಟ ಇರೋದಿಲ್ಲ, ಹಾಯಾಗಿರಬಹುದು ಅಂತ! ಆದರೆ ಕೆಲಸಕ್ಕೆ ಸೇರಿದ ಸ್ವಲ್ಪ ದಿನಗಳಲ್ಲಿ ಭಯಾನಕವಾಗಿಯೇ ಜ್ಞಾನೋದಯ ಆಯ್ತು - ಅಸಲಿಗೆ ವೃತ್ತಿಜೀವನದಲ್ಲಿ ಪ್ರತಿಯೊಂದು ದಿನವೂ ಪರೀಕ್ಷೆಯೇ ಅನ್ನೋದು. ಮಾಡುವ ಕೆಲಸವನ್ನು ಪ್ರೀತಿಸಬೇಕು, ಯಾವುದೇ ಕೆಲಸವಾದರೂ ಸರಿ, ಶ್ರದ್ಧೆ, ಪ್ರಾಮಾಣಿಕತೆ ಇರಬೇಕು ಅನ್ನುವ ಮಾತುಗಳನ್ನು ಕೇಳುವಾಗೆಲ್ಲ ನನಗೆ ಸಾಮಾನ್ಯರಲ್ಲಿ ಸಾಮಾನ್ಯರೆನಿಸುವ, ಆದರೂ ತಮ್ಮ ವೃತ್ತಿಗೌರವವನ್ನು ನಿಷ್ಠೆಯಿಂದ ಕಾಪಾಡಿಕೊಂಡು ಬರುತ್ತಿರುವ ಕೆಲವು ವ್ಯಕ್ತಿಗಳು ನೆನಪಾಗುತ್ತಾರೆ.

***

ಹುಡುಗಿಯರು ತೆಗೆದುಕೊಳ್ಳುವ ಚಪ್ಪಲಿಗಳೇ ಹಾಗಿರುತ್ತವೋ ಅಥವಾ ಅವುಗಳ ತಯಾರಿಕೆಯೇ ಹಾಗೋ (ಅಥವಾ ನಮ್ಮ ಪಾದಗಳೇ ಹಾಗೋ!).. ಅಂತೂ ನನಗನಿಸುವಂತೆ ನಮ್ಮ - ಹುಡುಗಿಯರ ಚಪ್ಪಲಿಗಳು ಹಾಳಾಗುವುದು ಬಲುಬೇಗ. ತೀರ ನಾಜೂಕಾಗಿದ್ದು ಸ್ವಲ್ಪ ಕಾಲು ಕೊಂಕಿಸಿದರೂ, ಬಸ್ಸಿಗೆ ಲೇಟಾಯ್ತೆಂದು ಸ್ವಲ್ಪ ಓಡಿದರೂ ಸರಿಯಾದ ಸಮಯದಲ್ಲಿ ಕೈ (ಕಾಲು?) ಕೊಟ್ಟುಬಿಡುತ್ತವೆ. ಆಮೇಲೆ ಆ ಬಾರು ಕಟ್ಟಾದ ಸುಂದರ ಚಪ್ಪಲಿಯನ್ನ ಕಷ್ಟಪಟ್ಟು ಪಾದಕ್ಕೆ ಅಂಟಿ ನಿಲ್ಲುವಂತೆ ಕಾಲೆಳೆಯುತ್ತಾ ಚಪ್ಪಲಿ ಹೊಲಿಯುವ ಅಂಗಡಿಯನ್ನು ಹುಡುಕುತ್ತಾ ಅಲೆಯುವ ಪಾಡು ದೇವರಿಗೇ ಪ್ರೀತಿ. ಹೊಸ ಚಪ್ಪಲಿ ಕೊಳ್ಳಲು ಸಮಯ, ವ್ಯವಧಾನ, ಹಣದ ಅಭಾವ, ಜೊತೆಗೆ ಈ ಕಾಲೆಳೆಯುವ `ಕ್ಯಾಟ್‌ವಾಕ್'ಅನ್ನು ಅದೆಷ್ಟು ಜನ ನೋಡಿ ಮನಸಲ್ಲೇ ನಗುತ್ತಿದ್ದಾರೋ ಅನ್ನುವ ಅವಮಾನ ಆ ಕ್ಷಣಕ್ಕೆ ಚಪ್ಪಲಿ ಹೊಲಿಯುವವರ ಅನಿವಾರ್ಯತೆಯನ್ನು ಸೃಷ್ಟಿ ಮಾಡಿಬಿಡುತ್ತವೆ. ಇಂತಹ ಹಲವು ಸಂದರ್ಭಗಳಿಗೆ ಆಪದ್ಬಾಂಧವನಂತೆ ನನಗೆ ನೆರವಾಗುತ್ತಿದ್ದವರು ನಮ್ಮ ಕಾಲೇಜೆದುರಿಗೆ ಚಪ್ಪಲಿ ಹೊಲಿಯುವ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ. ಅವರ ಕೈಗೆ ಚಪ್ಪಲಿ ಒಪ್ಪಿಸಿದ್ದೇ ನನ್ನ ಮನಸ್ಸು ನಿರಾಳವಾಗಿಬಿಡುತ್ತಿತ್ತು. ಅಂಗ ಊನವಾದ ಆ ಚಪ್ಪಲಿಯನ್ನು ತನ್ನ ಮಗುವೇನೋ ಎಂಬಂತೆ ಕಾಳಜಿಯಿಂದ ಕೈಗೆತ್ತಿಕೊಂಡು ಶ್ರದ್ಧೆಯಿಂದ ಹೊಲಿಗೆ ಹಾಕಿ, ಅಗತ್ಯ ಬಿದ್ದರೆ (ಅಂದರೆ ಚಪ್ಪಲಿ ನೋಡಲಾಗದಷ್ಟು ಬಣ್ಣ ಕಳೆದುಕೊಂಡಿದ್ದರೆ) ಪಾಲಿಶ್ ಕೂಡ ಮಾಡಿ ಅವರು ಚಪ್ಪಲಿ ವಾಪಸ್ ಕೊಡುವುದನ್ನ ನೋಡುವುದೇ ಒಂದು ಸೊಗಸು! ಆ ಶ್ರದ್ಧೆ ಪ್ರಾಯಶಃ ತಮ್ಮ ಕೆಲಸವನ್ನು ತುಂಬ ಪ್ರೀತಿಸುವವರಿಗೆ ಮಾತ್ರ ಇರಲು ಸಾಧ್ಯವೇನೋ. ಆತ ಹೊಲಿಗೆ ಹಾಕಿದ ಜಾಗ ಮತ್ತೆ ಯಾವತ್ತೂ ತುಂಡಾದದ್ದಿಲ್ಲ. ಅಪ್ಪಿತಪ್ಪಿ ಅವರ ಹೆಂಡತಿಯೋ, ಮಗನೋ ಹೊಲಿಗೆ ಹಾಕಿ ಮತ್ತದೇ ಕಡೆ ಚಪ್ಪಲಿ ಬಾರ್ ಕಟ್ಟಾದರೂ ಪುನಃ ಹೊಲಿಗೆ ಹಾಕೋದಕ್ಕೆ ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ ಅವರು. ರಿಪೇರಿಯಾದ ಚಪ್ಪಲಿಯನ್ನು ಹಾಕಿಕೊಂಡು ಸ್ಟೈಲ್ ಹೊಡೆಯುವಾಗೆಲ್ಲ ಅವರ ನೆನಪೇ ಇರುತ್ತಿರಲಿಲ್ಲ ನನಗೆ. ಮತ್ತೆ ಪುನಃ ಅವರ ನೆನಪಾಗುತ್ತಿದ್ದುದು ಪುನಃ ಚಪ್ಪಲಿ ಕಟ್ಟಾದಾಗಲಷ್ಟೇ. ಆ ಪುಟ್ಟ ಕೆಲಸದಲ್ಲೂ ಇದ್ದ ಅವರ ಪರಿಶ್ರಮ, ಶ್ರದ್ಧೆಯ ಅರಿವು ನನಗಾದುದು ನಾನು ಬೇರೆಯವರ ಬಳಿ ಚಪ್ಪಲಿ ಹೊಲಿಸಿಕೊಂಡು ಕೈಸುಟ್ಟುಕೊಂಡಾಗ! ಒಳ್ಳೆಯತನದ ಅರಿವಾಗುವುದು ಕೆಡುಕಿನ ಅನುಭವ ಆದಾಗ ಮಾತ್ರ ಅಲ್ಲವೇ?

***


ಯಾವುದೇ ಕಂಪೆನಿ ಅಥವಾ ಕಾಲೇಜಿನ ಸೆಕ್ಯುರಿಟಿ ಗಾರ್ಡ್ ಕೆಲಸ, ಲಿಫ್ಟ್ ಆಪರೇಟರ್ ಕೆಲಸಗಳೆಲ್ಲ ಎಷ್ಟೊಂದು ಏಕತಾನತೆಯ, ಬೋರಿಂಗ್ ಕೆಲಸಗಳಲ್ಲವಾ ಅಂತ ನಾನು ಯಾವಾಗಲೂ ಅಂದುಕೊಳ್ಳುವುದಿತ್ತು. ದಿನಾ ಅವವೇ ಮುಖಗಳನ್ನ ಹತ್ತಾರು ಬಾರಿ ನೋಡಬೇಕು. ನೋಡುತ್ತಿದ್ದರೂ ಪರಸ್ಪರ ಸಂವಹನಕ್ಕೆ ವಿಷಯಗಳೇ ಇರುವುದಿಲ್ಲ. ಆ ಕೆಲಸದಲ್ಲಿರುವವರು ಹೇಗೆ ಇದನ್ನ ಸಹಿಸಿಕೊಳ್ಳುತ್ತಾರೋ ಅಂದುಕೊಳ್ಳುತ್ತಿದ್ದೆ. ಆದರೆ ನಮ್ಮ ಕಾಲೇಜಿನ ಲಿಫ್ಟ್ ಆಪರೇಟರನ್ನು ನೋಡಿದ ನಂತರ ಇಂತಹ ಕೆಲಸಗಳನ್ನೂ ಎಷ್ಟೊಂದು ಖುಷಿಯಿಂದ ಮಾಡಬಹುದು, ಏಕತಾನತೆ ದೂರ ಮಾಡಿಕೊಳ್ಳಬಹುದು ಅನ್ನುವುದಕ್ಕೆ ನಿದರ್ಶನ ಸಿಕ್ಕಿತು. ಸದಾ ಹಸನ್ಮುಖಿಯಾಗಿರುತ್ತಿದ್ದ ನಮ್ಮ ಲಿಫ್ಟ್ ಮ್ಯಾನ್ (ನಾವವರನ್ನ ಕರೆಯುತ್ತಿದ್ದುದೇ ಹಾಗೆ) ಲಿಫ್ಟ್ ಹತ್ತಿದ ಎಲ್ಲರನ್ನೂ ತಾವೇ ಮಾತನಾಡಿಸುತ್ತಿದ್ದರು ಸ್ವಲ್ಪವೂ ಕಿರಿಕಿರಿಯೆನಿಸದಂತೆ. ಕನ್ನಡ, ಕೊಂಕಣಿ, ತುಳು ಅಷ್ಟೇ ಅಲ್ಲದೆ ಇಂಗ್ಲಿಷ್ ಮಾತ್ರ ಉಲಿಯಬಲ್ಲವರನ್ನು ಸಂಭಾಳಿಸುವಷ್ಟು ಇಂಗ್ಲಿಷ್ ಕೂಡ ಬರುತ್ತಿತ್ತು ಅವರಿಗೆ. ದಿನವೂ ಲಿಫ್ಟ್ ಶುಚಿಗೊಳಿಸಿ, ಊದುಬತ್ತಿ ಹಚ್ಚಿ ಅಲ್ಲೊಂದು ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಿ, ಲಿಫ್ಟಿನ ಸಕಲ ಮೇಲ್ವಿಚಾರಣೆ ನೋಡಿಕೊಳ್ಳುತ್ತ, ಜೊತೆಗೆ ಲಿಫ್ಟಿನ ಮಿತಿ ಮೀರಿದ್ದರೂ ಅದರಲ್ಲಿ ಹತ್ತಿಕೊಂಡು ರೂಲ್ಸ್ ಬ್ರೇಕ್ ಮಾಡಲು ಹವಣಿಸುವ ನಮ್ಮಂಥ ವಿದ್ಯಾರ್ಥಿಗಳನ್ನು ಮೃದು ಮಾತುಗಳಿಂದಲೇ ನಿಯಂತ್ರಿಸುತ್ತ ತಮ್ಮ ಕೆಲಸವನ್ನು ಸಂಪೂರ್ಣ ಸಂತೋಷದಿಂದ ನಿರ್ವಹಿಸುವ ಅವರ ವೈಖರಿ ನನಗಂತೂ ಯಾಕೋ ತುಂಬ ಇಷ್ಟವಾಯಿತು. `ಆಲ್‌ಕೆಮಿಸ್ಟ್'ನಲ್ಲಿ ವರ್ಣಿಸಿರುವ ಮನುಷ್ಯನ ನಿಯತಿಯ ರೀತಿಯಲ್ಲಿ ಇವರು ತಮ್ಮ ಪಾಲಿನ ನಿಯತಿಯನ್ನು ಕಂಡುಕೊಂಡಿದ್ದಾರೇನೋ ಅಂತ ಅವರನ್ನು ನೋಡಿದಾಗೆಲ್ಲ ಅಂದುಕೊಂಡಿದ್ದೇನೆ.

***

ಇನ್ನಿದು ಮೊನ್ನೆ ಮೊನ್ನೆಯಷ್ಟೇ ನಡೆದ ಘಟನೆ. ಟೆಲಿಫೋನ್ ಬಿಲ್ ಕಟ್ಟುವ ಅವಧಿ ಮೀರಿತ್ತಾದ್ದರಿಂದ ಬಿಲ್ ಕಟ್ಟೋಕೆ ಬಿಎಸ್‌ಎನ್‌ಎಲ್ ಆಫೀಸ್‌ಗೇ ಹೋಗಿದ್ದೆ. ಅಲ್ಲಿಗೆ ಹೋಗಿದ್ದು ಅದೇ ಮೊದಲ ಬಾರಿ. ಹಣ ಕಟ್ಟಿ, ಅವರು ವಾಪಸ್ ಕೊಟ್ಟ ಬಿಲ್ ಮತ್ತು ಚಿಲ್ಲರೆಯನ್ನು ಎಣಿಸೋಕೆ ಹೋಗದೆ ಹಾಗೇ ತೆಗೆದುಕೊಂಡು ಬಂದೆ. ಮರುದಿನ ಪರ್ಸ್ ನೋಡುವಾಗ ೨೦೦ ರೂ. ಕಡಿಮೆ ಇದೆಯಲ್ಲ ಅನಿಸಿತಾದರೂ ಬಹುಶಃ ೫೦೦ ರೂ. ಕೇಳಿದ ಸ್ನೇಹಿತೆಗೆ ೨೦೦ ರೂ. ಹೆಚ್ಚುವರಿ ನೀಡಿದೆನೇನೋ, ಆಮೇಲೆ ಕೇಳಿದರಾಯಿತು ಅಂದುಕೊಂಡು ಸುಮ್ಮನಾದೆ. ೪ ದಿನಗಳ ನಂತರ, ಸೋಮವಾರ ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಆಫೀಸಿಗೆ ಹೊರಡುತ್ತಿರಬೇಕಾದರೆ ನಮ್ಮ ಲ್ಯಾಂಡ್‌ಲೈನ್ ಫೋನ್‌ಗೆ ಕರೆ ಬಂತು. "ಮೊನ್ನೆ ಬಿಎಸ್‌ಎನ್‌ಎಲ್ ಆಫೀಸಲ್ಲಿ ಬಿಲ್ ಕಟ್ಟಿದ್ದೀರಾ" ಅಂತ. ಹೌದು ಅಂದೆ. "೨೦೦ ರೂ. ಜೊತೆಗೆ ಬಿಲ್ ಕಟ್ಟಿದ ರಶೀದಿ ಕೂಡಾ ಹಾಗೇ ಬಿಟ್ಟುಹೋಗಿದ್ದೀರಲ್ಲ" ಅಂದರು ಆ ಕಡೆಯಿಂದ. " ಅಯ್ಯೋ ಹೌದಾ? ನನಗೆ ಗೊತ್ತೇ ಆಗಲಿಲ್ಲ. ನೀವೀಗ ಫೋನ್ ಮಾಡಿ ಹೇಳಿದ್ದೇ ಗೊತ್ತಾಯಿತು" ಅಂದೆ. ಆ ಕಡೆಯ ವ್ಯಕ್ತಿ "ಹ್ಮ್. ನಾನೂ ಹಾಗೇ ಅಂದುಕೊಂಡೆ. ನಾನು ೩ ದಿನ ರಜೆ ಹಾಕಿ ಊರಿಗೆ ಹೋಗಿದ್ದೆ. ನಿಮ್ಮ ಹಣ ಮತ್ತು ರಶೀದಿಯನ್ನು ಬೇರೆ ಸ್ಟಾಫ್ ಬಳಿ ಕೊಟ್ಟು ಹೋಗಿದ್ದೆ, ನೀವೇನಾದರೂ ಬಂದು ಕೇಳಿದರೆ ಕೊಡಿ ಅಂತ. ಇವತ್ತು ಬೆಳಿಗ್ಗೆಯಷ್ಟೇ ವಾಪಸ್ ಬಂದೆ. ಆದ್ರೆ ನೀವಿನ್ನೂ ಬಂದಿಲ್ಲ ಇಲ್ಲಿಗೆ ಅಂತ ಗೊತ್ತಾಯ್ತು. ಬಹುಶಃ ನಿಮ್ಮ ಗಮನಕ್ಕೆ ಬಂದಿಲ್ಲ ಅನ್ನಿಸಿ ಫೋನ್ ಮಾಡಿ ಹೇಳೋಣ ಅಂದುಕೊಂಡೆ" ಅಂದರು. ನನಗೆ ಏನು ಹೇಳಲೂ ತೋಚಲಿಲ್ಲ. ಇದರಲ್ಲಿ ಸಂಪೂರ್ಣ ಬೇಜವಾಬ್ದಾರಿ ನನ್ನದೇ ಆಗಿತ್ತು. ನಾನೇ ಅವರ ಬಳಿ ಹೋಗಿ ಹಣ ವಾಪಸ್ ಕೇಳಿದ್ದರೂ ಅವರು ತನಗೆ ಗೊತ್ತಿಲ್ಲ ಅಂದಿದ್ದರೆ ನಾನೇನೂ ಮಾಡುವಂತಿರಲಿಲ್ಲ. ಹೀಗಿದ್ದರೂ ತಾವೇ ನನಗೆ ಫೋನ್ ಮಾಡಿ ನನ್ನ ಜವಾಬ್ದಾರಿ ನೆನಪಿಸಿದ ಅವರಿಂದ ಹಣ ವಾಪಸ್ ಪಡೆಯುವಾಗ "ತುಂಬಾ ಥ್ಯಾಂಕ್ಸ್" ಎನ್ನುವ ಸವಕಲು ಪದಗಳನ್ನಷ್ಟೇ ಹೇಳಲು ಸಾಧ್ಯವಾಯ್ತು ನನಗೆ. ತಾನು ತುಂಬಾ ಪ್ರಾಮಾಣಿಕ, ಹಾಗೆ ಹೀಗೆ ಅಂತ ದೊಡ್ಡ ವರ್ಣನೆಗಳೇನೂ ಬರಲಿಲ್ಲ ಅವರ ಬಾಯಿಂದ. "ಬೇರೆಯವರ ಹಣ ನಮ್ಗ್ಯಾಕೆ ಬಿಡಿಯಮ್ಮ" ಅಂತಷ್ಟೇ ಹೇಳಿದರು. ಅವರ ಪ್ರಾಮಾಣಿಕತೆ ತುಂಬ ಅಚ್ಚರಿ ಕೊಟ್ಟಿತು ನನಗೆ. ಅಷ್ಟಕ್ಕೂ ನಾನೊಬ್ಬಳು ಮಾತ್ರ ಪ್ರಾಮಾಣಿಕತೆಯ, ಇನ್ನಿತರ ಎಲ್ಲ ಸದ್ಗುಣಗಳ ಅಪರಾವತಾರ. ಉಳಿದೆಲ್ಲ ಹುಲುಮಾನವರು ದುಷ್ಟರು ಅಂತ ಭಾವಿಸುವುದು, `ಬೆಳ್ಳಗಿರುವುದೆಲ್ಲ ಹಾಲು' ಅಂತ ನಂಬಿಕೊಂಡಷ್ಟೇ ಮೂರ್ಖತನ ಅಲ್ವಾ?

18 comments:

SujaReeth said...

Thumba sogasagide subbi...


Odi khushi aythu..Nangu ninna kathaa nayakarannu omme nodbeku antha anisthide..

yavaga hoguva nim college ge?


Ide rithi baritha iru...nanage arivige barada nanantha ollevara bagge thilkoluva asakthi moodthide...barithiyalva?

Harisha - ಹರೀಶ said...

ಎಲ್ಲವೂ ಕಣ್ತೆರೆಸುವ ಘಟನೆಗಳು.. ಉತ್ತಮವಾಗಿ ಬರೆದಿದ್ದೀರಿ.

ಆದರೆ ಎಲ್ಲರಲ್ಲೂ ಪ್ರಾಮಾಣಿಕತೆ, ನಿಷ್ಠೆ ಬಯಸುವ ಜನ ತಮ್ಮದೇ ಸರದಿ ಬಂದಾಗ ಮುಖ ತಿರುಗಿಸುವುದು ದುರದೃಷ್ಟಕರ :-(

urbhat [Raj] said...

ಈಗಿನ ಕಾಂಪಿಟೇಟಿವ್ ಪ್ರಪಂಚದಲ್ಲಿ ಕಾಯಕವೇ ಕೈಲಾಸವೆನ್ನುವುದು ಮರೆತುಹೋಗುತ್ತಿರುವಾಗ ನಿಮ್ಮ ಬರಹ ಮನಮುಟ್ಟುವಂತಿದೆ.

Lakshmi Shashidhar Chaitanya said...

tumbaa chennaagi bardiddeera. chappali mattu lift episode nanagu nanna college days nenapisitu. nijavaagalu, eegina kaaladalli praamaanikate annodu kaaNasiguvude aparoopa.

sunaath said...

ಜಗತ್ತಿನಲ್ಲಿ ಒಳ್ಳೆಯದು ನೋಡಲು ಸಿಕ್ಕಾಗ ಎಂಥಾ ಖುಶಿ ಆಗತ್ತೆ ಅಲ್ವಾ?
ಒಬ್ಬ ಚಪ್ಪಲಿ ಹೊಲೆಯುವವ, ಒಬ್ಬ lift-man ಸಹ ನಮ್ಮ ದಿನವನ್ನು ಸೊಗಸುಗೊಳಿಸಬಲ್ಲರು.
ಉತ್ತಮ ಲೇಖನಕ್ಕಾಗಿ ಅಭಿನಂದನೆಗಳು.

ಭಾರ್ಗವಿ said...

ಕೆಲಸದ ಬಗ್ಗೆ ಶ್ರದ್ಧೆ,ಪ್ರಾಮಾಣಿಕತೆ ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಲೇಖನದಲ್ಲಿ ಚಪ್ಪಲಿ ಹೊಲಿಯುವವರಿಗೂ ನೀವು ಕೊಟ್ಟ ಗೌರವ ಮೆಚ್ಚುವಂತಹುದು. ಗೌರವ ಕೊಟ್ಟು ತೆಗೆದು ಕೊಳ್ಳೋದು ಕಲಿಬೇಕು ಅನ್ನೋ ಹಿರಿಯರ ಮಾತು ನಿಜ ಮಾಡಿದ್ದೀರಿ. ಅಭಿನಂದನೆಗಳು .ಬರೆಯುತ್ತಿರಿ.

Ashwini Mayya said...

Hi...tumba chennagi bardiddiya...
nam collge na lift man bagge bardirodantu anthu tumba sogasagi moodi bandide.

heeege barita iru..
:)

Tina said...

ಶುಭದಾ,
ಬರಹದ ಹಿಂದಿನ ಯೋಚನೆ ಗಾಢವಾಗಿ ತಟ್ಟಿತು.ಬಹಳ ದಿನಗಳ ಮೇಲೆ ಇಲ್ಲಿ ಬಂದೆ. ಮಿಸ್ ಮಾಡಿಕೊಂಡ ಹಿಂದಿನ ಬರಹಗಳೂ ಸುಲಲಿತವಾಗಿ ಓದಿಸಿಕೊಂಡು ಹೋದವು. ನಿಜಕ್ಕೂ ’ಪಾರಿಜಾತ’ದ ಕಂಪು ಮಧುರವಾಗಿದೆ!!
-ಟೀನಾ

Shubhada said...

ಸುಜಾತ,
ಥ್ಯಾಂಕ್ಸ್ ಮರೀ.. ನಿನ್ನಂಥ ಒಳ್ಳೆಯೋರ(?) ಬಗ್ಗೆಯೂ ಬರೆಯೋಕೆ ಪ್ರಯತ್ನ ಪಡ್ತೀನಿ ಮುಂದೆ ;-)

ಹರೀಶ್,
ನೀವು ಹೇಳೋದು ನಿಜ. ಆದ್ರೂ ಎಲ್ಲೋ ಕೆಲವೆಡೆ ನಮ್ಮ ನಿಮ್ಮಂಥ ಒಳ್ಳೆಯವರೂ ಇರ್ತಾರೆ ಅನ್ನೋದೂ ಅಷ್ಟೇ ಸತ್ಯ ಅಲ್ವಾ? :-)

ರಾಜೇಂದ್ರ, ಲಕ್ಷ್ಮಿ, ಸುನಾಥ ಕಾಕಾ, ಭಾರ್ಗವಿ, ಅಶ್ವಿನಿ, ಟೀನಾ,
ತುಂಬಾ ಧನ್ಯವಾದಗಳು. ಬರ್ತಾ ಇರಿ, ಬರೀತಾ ಇರಿ :-)

Unknown said...

hey really nice... too good.
we can expect the articles from sensentive girl from u itself..thanks a lot...

Unknown said...

Super I never imagined my colleague would be such a good writer. Good Keep it up.

Bareyuve Ninagagi said...

ತುಂಬಾ ಚೆನ್ನಾಗಿ ಬರೆದಿದ್ದೀರ ... ನಿಮ್ಮ ಬರವಣಿಗೆ ಎಲ್ಲೂ ಬೋರ್ ಒಡೆಸೋಲ್ಲ...ಹೀಗೆ ಮುಂದುವರಿಸಿ

Santhosh Rao said...

ತುಂಬ ಚೆನ್ನಾಗಿ ಬರೆದಿದ್ದೀರ ..
ವಿಷಯಗಳು ಚಿಂತನೆಗೆ ಹಚ್ಚುತ್ತೆ

Unknown said...

Your view about a common day to day event is splendid. As Sir. M. Visheswariah said " if every one do their duty correctly we will succeed, even a sweeper cleans & tries to maintain his street a world class street". A thoughtful narration; keep writing.
by shridhar.

ಸಾಗರದಾಚೆಯ ಇಂಚರ said...

Tumba chennagide, keep writing

Anonymous said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

chetana said...

Namaste Shubhadaa
Can u plz gv me ur Mail ID?
Mine is
chetanachaitanya@gmail.com.Plz forward urs.

Nalme,
Chetana Teerthahalli

Jagali bhaagavata said...

enta barudilya?