Monday, July 7, 2008

ಚವಣೆ ಪುರಾಣ!!


ಆವತ್ತು ಬೆಳಿಗ್ಗೆ ಅಮ್ಮ ಬೆಂಗಳೂರಿಗೆ ಬಂದಿಳಿದವಳು, ‘ಬಸ್ಸಲ್ಲಿ ಚವಣೆ (ಅರ್ಥಾತ್ ತಿಗಣೆ) ಇತ್ತೇನೋ... ರಾತ್ರಿಯೆಲ್ಲ ಏನೋ ಕಚ್ತಿತ್ತು. ತುರಿಸ್ಕೊಂಡು ಸಾಕಾಯ್ತು’ ಅನ್ನುತ್ತಿದ್ದಳು. ಅದಕ್ಕೆ ಅಪ್ಪಯ್ಯ, ‘ಚವಣೆಯಾ? ಮತ್ತೆಂತದಾ? ನೀನು ಕಿಟಕಿ ಚೂರು ಓಪನ್ ಮಾಡಿ ಕೂತ್ಕಂಡಿದ್ಯಲ್ಲ, ಸೊಳ್ಳೆ ಗಿಳ್ಳೆ ಬಂದಿಪ್ಕೂ ಸಾಕ್. ಚವಣೆ ಎಲ್ಲ ಈಗ ಎಲ್ಲಿತ್ತ್? ಅದ್ರ ಸಂತತಿಯೇ ನಾಶ ಆಯಿತ್ತೇನೋ! ನಿಂಗೆ ಭ್ರಮೆ, ಬಸ್ಸಲ್ಲಿ ಚವಣೆ ಇತ್ತಂತ’ ಅಂತ ಅಮ್ಮನ ಕಾಲೆಳೆದರು. ಅಷ್ಟರಲ್ಲಿ ನಾನು ‘ಚವಣೆ ಅಂದ್ರೆ ಹ್ಯಾಂಗಿರ್‍‍ತ್ತಮ್ಮ?’ ಅಂತ ಯಾವತ್ತಿನ ನನ್ನ ಅಜ್ಞಾನದ ಪ್ರದರ್ಶನ ಮಾಡಿಕೊಂಡೆ. ಅಮ್ಮ, ‘ಚವಣೆ ಸಾ ಕಾಣ್ಲಿಲ್ಯಾ ಮಾರಾಯ್ತಿ ನೀನು? ನೆಂಪಿನ ನಮ್ಮ ಮನೇಲಿ ಆ ಪಾಟಿ ಇದ್ದಿತ್ತಲ್ಲ?!’ ಅಂತ ಛೇಡಿಸಿ, ಚವಣೆಯ ಗುಣಲಕ್ಷಣಗಳನ್ನೆಲ್ಲ ಕಣ್ಣಿಗೆ ಕಟ್ಟುವ ಹಾಗೆ ಹೇಳಿ, ನೆಂಪಿನ ಮನೆಯಲ್ಲಿನ ಹಾಸಿಗೆ, ಹೊದೆಸ್ತ್ರ (ಹೊದೆಯುವ ವಸ್ತ್ರ), ತಲ್ದಿಂಬು(ತಲೆದಿಂಬು)ಗಳಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿರುತ್ತಿದ್ದ ತಿಗಣೆಗಳು, ರಾತ್ರಿಯೆಲ್ಲ ಮನೆಯವರ ರಕ್ತಹೀರುತ್ತಾ, ಒಂದೊಮ್ಮೆ ಬಿಸಿಲಿಗೆ ಹಾಕಿದ ಕೂಡಲೇ ಬುಳಬುಳನೆ ಪರಿವಾರ ಸಮೇತ ಹೊರಬರುತ್ತಿದ್ದುದನ್ನೆಲ್ಲ ನನ್ನ ಮೈಮೇಲೆ ಮುಳ್ಳೇಳುವ ಹಾಗೆ ವರ್ಣಿಸಿದಳು! ಮನೆಯೊಳಗೆ ಒಂದು ಸೇರಿಕೊಂಡರೂ ಸಾಕು, ತನ್ನ ಸಂತಾನವನ್ನು ಲಕ್ಷಗಟ್ಟಲೆ ವೃದ್ಧಿಗೊಳಿಸಿಕೊಳ್ಳುವ ಸಾಮರ್ಥ್ಯ ಇರುವಂಥದ್ದು ಅಂತ ಹೆದರಿಸಿದಳು. ಈ ವರ್ಣನೆಗಳನ್ನೆಲ್ಲ ಕೇಳಿದ ಮೇಲೆ ನನಗೆ ‘ಛೇ! ಇಂತ ಸಂತತಿ ನನ್ನ ಕಣ್ಣಿಗೆ ಬೀಳುವ ಮೊದಲೇ ಅವಸಾನ ಕಾಣಬಾರದಿತ್ತು’ ಅಂತ ಅದೇನೋ ಒಂಥರಾ ಬೇಜಾರಾಯ್ತು! ಯಾಕೋ ಕರ್ವಾಲೋ ಕೂಡ ನೆನಪಾಗಿಬಿಟ್ಟರು! ಅಷ್ಟೆಲ್ಲ ಫೀಲಿಂಗ್ ಮಾಡಿಕೊಂಡದ್ದೇ ತಪ್ಪಾಗಿಹೋಯ್ತು ಬಿಡಿ.


ಚಿಕ್ಕಂದಿನಿಂದಲೂ ನನಗೆ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗೋದೆಂದರೆ ಇಷ್ಟ. ಬೆಂಗಳೂರಿಗೆ ಹೊರಡುವ ಒಂದು ವಾರ ಮೊದಲೇ ಶುರುವಾಗುವ ಪ್ಯಾಕಿಂಗ್, ಆ ಕತ್ತಲ ಪ್ರಯಾಣ, ಕೆ‍ಎಸ್ಸಾರ್ಟಿಸಿಯ ಹಸಿರು ಬಣ್ಣದ, ಕಲ್ಲಿನಷ್ಟು ಮೃದುವಾದ ಸೀಟುಗಳು, ಒಂದೇ ಸೀಟಿನಲ್ಲಿ ಇಬ್ಬರು ಕೂತು ವಿಂಡೋ ಸೀಟಿಗಾಗಿ ಬಡಿದಾಡೋದು, ದಾರಿಯುದ್ದಕ್ಕೂ ಕಂಗೊಳಿಸುವ ರಸ್ತೆ ದೀಪಗಳು, ದಾರಿ ಮಧ್ಯ ಬಸ್ಸು ನಿಲ್ಲಿಸಿದಾಗ ಅಪ್ಪಯ್ಯ ತಂದು ಕೊಡುವ ಹಾಲು, ಬ್ರೆಡ್ಡು, ಅರೆ ನಿದ್ದೆ, ಮಂಪರು, ರಾತ್ರಿ ಕಳೆದು ಬೆಳಕಾಗುವುದರೊಳಗೆ ಮಾಯಾನಗರಿಯನ್ನು ತಲುಪಿಸುತ್ತಿದ್ದ ಮ್ಯಾಜಿಕ್ ಬಸ್ಸು, ಪ್ರಯಾಣದ ಮರುದಿನದ ಹಗಲಿನ ಸಿಹಿನಿದ್ದೆ ಎಲ್ಲ ತುಂಬ ಖುಷಿ ಕೊಡುತ್ತಿತ್ತು. ಈ ಎಲ್ಲ ಸಂಭ್ರಮದಲ್ಲಿ ಆ ಬಸ್ಸಲ್ಲಿ ತಿಗಣೆಯೇನು, ಹೆಗ್ಗಣವೇ ಇದ್ದಿದ್ದರೂ ನನಗಂತೂ ಗೊತ್ತಾಗುತ್ತಿರಲಿಲ್ಲ.


ಆಗೆಲ್ಲ ಸಾಮಾನುಗಳನ್ನು ಸೀಟಿನ ಮೇಲಿರುತ್ತಿದ್ದ ‘ನಾಗವಂದಿಗೆ’ಯ (ಅದಕ್ಕೆ ನಿಜವಾಗಲೂ ಏನನ್ನುತ್ತಾರೋ, ನನಗಂತೂ ತಿಳಿಯದು! ನಮ್ಮೂರ ಕಡೆ ತಮಾಷೆಗಾಗಿ ಈ ಪದವೇ ಬಳಕೆಯಾಗುತ್ತದೆ) ಮೇಲೆ ತುರುಕಿ ‘ದುಡ್ಡಿನ ಚೀಲ’ಗಳನ್ನು ಮಾತ್ರ ಕೈಲಿ ಹಿಡಿದುಕೊಂಡು ಹಾಯಾಗಿರುತ್ತಿದ್ದೆವು. ಈಗಿನ ಪ್ರೈವೇಟು ಬಸ್ಸುಗಳಲ್ಲಿ ಈ ನಾಗವಂದಿಗೆಗಳೆಲ್ಲ ಸ್ಲೀಪರ್‍‍ಗಳಾಗಿ ಮಾರ್ಪಟ್ಟಿವೆ! ಮಲಗಿದವರು ಕೆಳಬೀಳದ ಹಾಗೆ ದಪ್ಪ ದಪ್ಪ ಸರಳುಗಳೇನೋ ಇವೆ. ಆದರೆ ನನ್ನಂಥವರಿಗೆ ನಿದ್ದೆ ಮಂಪರಲ್ಲಿ ಬಸ್ಸಿನ ತೂರಾಟಕ್ಕೆ ಈ ಸರಳುಗಳ ಸ್ಕ್ರೂ ಸಡಿಲಾಗಿ ಈ ಜೀವ ಇನ್ನೇನು ಕೆಳಬಿದ್ದು ಹಲ್ಲು ಮುರಿದರೇನು ಗತಿ ಅನ್ನುವ ವಿಚಿತ್ರ ಭಯ! ಜೊತೆಗೆ, ಸೀಸನ್ ಟೈಮಲ್ಲಿ ಈ ಸ್ಲೀಪರ್‍‍ಗಳು ಸಿಕ್ಕಾಪಟ್ಟೆ ರೇಟ್ ಏರಿಸಿಕೊಂಡು ಪಕ್ಕಾ ಫೋರ್‍‍ಟ್ವೆಂಟಿಗಳಾಗೋದರಿಂದ ನಾನು ಸೀಟುಗಳನ್ನ ಪ್ರಿಫರ್ ಮಾಡೋದೇ ಹೆಚ್ಚು.


ಆವತ್ತೂ ಅಷ್ಟೇ, ಗಡಿಬಿಡಿಯಲ್ಲಿ ಸೀಟ್ ರಿಸರ್ವ್ ಮಾಡಿಸಿ ಊರಿಗೆ ಹೊರಟೆ. ಬಸ್ಸು ಹತ್ತಿ ನೋಡಿದರೆ ನನ್ನಿಷ್ಟದ ವಿಂಡೋ ಸೀಟ್ ಆಗಿರಲಿಲ್ಲ. ಪಾಲಿಗೆ ಬಂದಿದ್ದು ಪಂಚಾಮೃತ ಅಂತಂದುಕೊಂಡು ಸುಮ್ಮನೆ ಕಿವಿಗೆ ಇಯರ್‍‍ಫೋನ್ ಸಿಕ್ಕಿಸಿಕೊಂಡು, ಬ್ಯಾಗನ್ನ ಕಾಲ ಮೇಲಿಟ್ಟುಕೊಂಡು ನನ್ನ ಸೀಟಲ್ಲಿ ಕೂತಿದ್ದೆ. ಅಲ್ಲೀವರೆಗೆ ಎಲ್ಲ ಸರಿಯಿತ್ತು ನೋಡಿ. ಮುಂದೊಂದು ಗಂಟೆ ಬಿಟ್ಟು ಬಸ್ ಹತ್ತಿದ ಪಕ್ಕದ ಸೀಟಿನ ಆಂಟಿ ಅದೇನು ಕಾರಣವೋ ನನ್ನ ಬಳಿ ‘ನೀನು ವಿಂಡೋ ಸೀಟಲ್ಲಿ ಕೂತ್ಕೋತಿಯಾಮ್ಮ?’ ಅಂತ ಕೇಳಿದ್ದೇ ತಡ, ನನಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸೋಷ್ಟು ಖುಷಿಯಾಗಿ ಈಚೆ ಬಂದೆ! ಆಮೇಲೆ ಎಲ್ಲ ಶುರುವಾಗಿದ್ದು.


ಪಿಟೀಲಿನಲ್ಲಿ ಅದ್ಭುತವಾಗಿ ಮೂಡಿಬರುತ್ತಿದ್ದ ಗೋರಖ್ ಕಲ್ಯಾಣ ರಾಗಕ್ಕೆ ಮನಸೋಲುತ್ತಿದ್ದ ಹಾಗೆ ಅದೇನೋ ತುರಿಕೆಯಾಗೋಕೆ ಶುರುವಾಯ್ತು. ಜೊತೆಗೆ ಕಾಲ ಮೇಲೆ, ಬೆನ್ನ ಮೇಲೆಲ್ಲ ಏನೋ ಹರಿಯುತ್ತಿದ್ದ ಹಾಗೆ ಬೇರೆ ಅನಿಸಿತು. ಸಂಗೀತಕ್ಕೆ ರೋಮಾಂಚನವಾಗುತ್ತಿದೆ ಅಂದುಕೊಂಡೆ! ಆದರೆ ಮಲಗೋಣ ಅಂದುಕೊಂಡು ಹಾಡು ನಿಲ್ಲಿಸಿದರೂ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ನವೆಯಾಗೋಕೆ ತೊಡಗಿತು. ಅಮ್ಮನ ಮಾತು, ಅಪ್ಪನ ಉತ್ತರ ಎರಡೂ ನೆನಪಾಯ್ತು. ನನಗೂ ಅಪ್ಪ ಹೇಳಿದ ಹಾಗೆ ಭ್ರಮೆ ಅಂದುಕೊಂಡು ಸುಮ್ಮನಾದೆ. ರಾತ್ರಿಯಿಡೀ ಮಂಪರಲ್ಲೇ ತುರಿಸಿಕೊಂಡು ತುರಿಸಿಕೊಂಡು ಸಾಕಾಗಿ ‘ಹಾಳು ಸೊಳ್ಳೆಗಳು’ ಅಂತ ಸರಿಯಾಗಿ ಶಾಪ ಹಾಕಿದರೂ ಬೆಳಗಾಗೋ ಹೊತ್ತಿಗೆ ಚೆನ್ನಾಗೇ ಗೊರಕೆ ಹೊಡೀತಿದ್ದೆ. ಕ್ಲೀನರ್ ನಮ್ಮೂರ ಹೆಸರು ಕರೆದು ‘ಇಳಿಯೋರಿದ್ದೀರಾ?’ ಅಂತ ಅರಚಿಕೊಂಡಾಗಲೇ ಎಚ್ಚರಾಗಿದ್ದು. ಭಾರೀ ಬೇಗ ಊರು ತಲುಪಿಸಿದ ಡ್ರೈವರ್‍‍ಗೆ ಡಬಲ್ ಥ್ಯಾಂಕ್ಸ್ ಹೇಳಿ ಮನೆಗೆ ಹೋಗಿ ಬಿದ್ದುಕೊಂಡೆ.


ನಿದ್ದೆಗಣ್ಣಲ್ಲಿ ಎದುರಲ್ಲೇ ಇದ್ದ ಬ್ಯಾಗಿಂದ ಏನೋ ಹರಿದುಕೊಂಡು ಬರುತ್ತಿದ್ದ ಹಾಗನಿಸಿತು. ಒಂದಿದ್ದಿದ್ದು ಎರಡಾಯ್ತು, ನಾಲ್ಕಾಯ್ತು, ಹತ್ತಾಯ್ತು... ಪುಟ್ಟ ಜಿರಳೆಗಳಂತಿವೆ ಎಲ್ಲ... ಅಷ್ಟೇ! ... ಅಮ್ಮನ ವಿವರಣೆಗಳೆಲ್ಲ ನೆನಪಿಗೆ ಬಂದು ನಿದ್ದೆಯೆಲ್ಲ ಹಾರಿಹೋಯ್ತು... ಅವಸಾನಗೊಂಡಿದೆ ಅಂತ ನಾನು ಭ್ರಮಿಸಿಕೊಂಡಿದ್ದ ತಿಗಣೆ ಸಂತಾನ ಮನೆಗಳನ್ನು ಬಿಟ್ಟು ಬಸ್ಸಲ್ಲೇ ಮನೆ ಮಾಡಿಕೊಂಡು ಈಗ ಸಧ್ಯಕ್ಕೆ ನನ್ನ ಬ್ಯಾಗನ್ನೇ ಮನೆ ಮಾಡಿಕೊಂಡಿದೆ ಅಂತ ಜ್ಞಾನೋದಯ ಆಯ್ತು! ಒಂದೊಂದನ್ನೇ ನಿರ್ದಾಕ್ಷಿಣ್ಯವಾಗಿ ಹೊರಗೆಸೆದು ಆಮೇಲೆ ಬ್ಯಾಗಿಗೆ ಬಿಸಿ ಬಿಸಿ ಕುದಿವ ನೀರಲ್ಲಿ ಸೋಪ್‍ವಾಟರಲ್ಲಿ ಅಭ್ಯಂಜನ ಮಾಡಿಸಿ ನಿಟ್ಟುಸಿರು ಬಿಟ್ಟೆ!


‘ನಾನೂ ತಿಗಣೆ ನೋಡಿದೆ’ ಅಂತ ನನ್ನ ಗೆಳತಿಯ ಬಳಿ ಕಥೆ ಹೊಡೆದಾಗ ಅವಳು ಈ ಬಗ್ಗೆ ರೀಸರ್ಚನ್ನೇ ಮಾಡಿರೋದಾಗಿ ಹೇಳಿದಳು! ಇಂಥಾ ಕಂಪೆನಿಗಳ, ಇಂಥಾ ಕಲರಿನ, ಈ ನಂಬರಿನ ಬಸ್ಸುಗಳಲ್ಲೆಲ್ಲ ತಿಗಣೆ ಪರಿವಾರ ಇದೆ ಅಂತ ಸಂಪೂರ್ಣ ಮಾಹಿತಿ ನೀಡಿದಳು. ವಿಶೇಷ ಅಂದ್ರೆ ಬರೀ ಸೀಟುಗಳಲ್ಲಿ ಮಾತ್ರ ಇರೋದಂತೆ ತಿಗಣೆಗಳು, ಸ್ಲೀಪರ್‍‍ಗಳಲ್ಲಿ ಇಲ್ಲವಂತೆ. ‘ಬಹುಶಃ ಕೂತಿರೋರ ಮೇಲೆ ತಿಗಣೆಗಳಿಗೆ ತುಂಬಾ ಪ್ರೀತಿ ಇರ್ಬೇಕು’ ಅಂದೆ. ‘ಅಲ್ಲ ಮಾರಾಯ್ತಿ, ಸ್ಲೀಪರ್‍‍ಗಳ ಮೇಲೆ ಬಿಸಿಲು ಬೀಳುತ್ತೆ ಚೆನ್ನಾಗಿ. ಅದರೆ ಸೀಟುಗಳ ಮೇಲೆ ಸ್ಲೀಪರ್ ಬರೋದ್ರಿಂದ ಜಾಸ್ತಿ ಬಿಸಿಲು ಬೀಳಲ್ಲ. ಅದ್ಕೇ ಇರ್ಬೋದು’ ಅಂದಳು. ಏನೋ... ಸಧ್ಯಕ್ಕಂತೂ ಅವಳ ಮಾಹಿತಿಯ ಮೇರೆಗೇ ಬಸ್ ಸೀಟ್ ರಿಸರ್ವ್ ಮಾಡಿಸೋದಾಗಿದೆ. ಆದರೆ ಬಸ್ಸಿನ ಕಲರ್, ನಂಬರ್‍‍ಗಳೆಲ್ಲ ಬಸ್ಸು ಹತ್ತುವಾಗಲೇ ಗೊತ್ತಾಗುವವುಗಳಾದ್ದರಿಂದ ತಿಗಣೆಗಳಿಂದ ಸೇವೆ ಮಾಡಿಸಿಕೊಳ್ಳುವ ಭಾಗ್ಯ ಕೆಲವು ಬಾರಿಯಾದರೂ ಸಿಕ್ಕೇ ಸಿಗುತ್ತದೆ. ಆಗೆಲ್ಲ ಅವಳೇ ಹೇಳಿದ ಮುಂಜಾಗರೂಕತಾ ಕ್ರಮಗಳನ್ನ (ಕಾಲಿಗೆ ಎಣ್ಣೆ ಹಚ್ಚಿಕೊಳ್ಳೋದು ಇತ್ಯಾದಿ) ತೆಗೆದುಕೊಂಡಿರಬೇಕಾಗುತ್ತದೆ. ಮೊನ್ನೆಯೂ ಬೆಂಗಳೂರಿಂದ ಬರುವಾಗ ತಿಗಣೆಗಳ ವಿಶೇಷ ಪ್ರೀತಿ, ಮಮತೆ ಪ್ರಾಪ್ತವಾಯ್ತು. ಇಳೀಬೇಕಾದರೆ, ‘ಅಣ್ಣಾ! ನಾನು ಕೂತಿರೋ ಸೀಟಲ್ಲಿ ಕೋಟ್ಯಂತರ ತಿಗಣೆಗಳು ಮಕ್ಳೂ ಮರಿಗಳ ಸಮೇತ ಇವೆ. ಸ್ವಲ್ಪ ಚೆನ್ನಾಗಿ ಯೋಗಕ್ಷೇಮ ವಿಚಾರಿಸ್ಕೊಳ್ಳಿ ಪಾಪ’ ಅಂತ ಕ್ಲೀನರ್‍‍ಗೆ ಹೇಳಿ ಬಂದೆ. ಏನು ವಿಚಾರಿಸ್ಕೋತಾರೋ ನೋಡ್ಬೇಕು.


ಇನ್ನೊಬ್ಬ ಗೆಳತಿ, ‘ಪೀಜಿಯಲ್ಲಿ ನಮ್ಮ ಬಂಕರುಗಳಲ್ಲಿ ಬೆಡ್‍ಬಗ್ಸೂ’ ಅಂತ ಅಲವತ್ತುಕೊಳ್ಳುತ್ತಿದ್ದಳು. ಹಾಸಿಗೆಯನ್ನ ಬಿಸಿಲಿಗಿಟ್ಟು, ಮಂಚವನ್ನೇ ಬಿಸಿಲಿಗಿಟ್ಟರೂ ಹೋಗಲಿಲ್ಲವಂತೆ. ಆಮೇಲೆ ಇವರೇ ಕೂತು ಮಂಚಕ್ಕೆ ಪೆಯಿಂಟ್ ಮಾಡಿ ತಿಗಣೆಗಳಿಂದ ಮುಕ್ತರಾದರಂತೆ! ‘ಹೇಗೂ ಎಕ್ಸ್‍ಪೀರಿಯನ್ಸ್ ಇದೆಯಲ್ಲ. ರಾತ್ರಿ ಬಸ್ಸುಗಳ ಸೀಟುಗಳಿಗೆ ಬಣ್ಣ ಹಚ್ಚೋ ಕಾಂಟ್ರಾಕ್ಟ್ ತಗೋ. ಒಳ್ಳೆ ಲಾಭ ಮಾಡ್ಬೋದು. ನಮ್ಮಂಥೋರಿಗೂ ಉಪಕಾರ ಆಗುತ್ತೆ’ ಅಂತ ನಾನು ಪುಕ್ಕಟೆ ಸಲಹೆ ಕೊಟ್ಟು ಉಗಿಸಿಕೊಂಡೆ.


ಏನೇ ಇರಲಿ. ಅಳಿವಿನ ಅಂಚಿನಲ್ಲಿರೋ(?) ಸಂತತಿಯನ್ನ ಸಾಕಿ ಸಲಹುತ್ತಿರುವ ರಾತ್ರಿ ಬಸ್ಸುಗಳ ಮಾಲೀಕರನ್ನ ಮೆಚ್ಚಲೇಬೇಕು ಅಲ್ವೇ? ನೀವೇನಂತೀರಿ? :-)

9 comments:

ಮನಸ್ವಿನಿ said...

:) :)

’ನಾಗಂದಿಗೆ’ನಾ? ’ನಾಗವಂದಿಗೆ’ನಾ ?

ನಮ್ಮ ಕಡೆ ’ನಾಗಂದಿಗೆ’ ಅಂತೀವಿ.

Lakshmi Shashidhar Chaitanya said...

ಆಹಾ ! ಈ ಲೇಖನ ನಾನು ನಾಲ್ಕನೇ ಕ್ಲಾಸ್ ನಲ್ಲಿ ತಿಗಣೆಇಂದ ಕಚ್ಚಿಸಿಕೊಂಡ ಪ್ರಸಂಗ ನೆನಪಿಸಿತು. ನಮ್ಮ ಸ್ಕೂಲ್ ಬೆಂಚ್ ನಲ್ಲಿ ತಿಗಣೆಗಳು ಮನೆ ಮಾಡಿದ್ವು !ನನಗೆ ಅವು ಕಚ್ಚಿ ಮೈಯೆಲ್ಲ ಗುಳ್ಳೆಗಳೆದ್ದಿದ್ದವು. ಅಮ್ಮ ಅಂತೂ ನನ್ನ ಬ್ಯಾಗ್ ನ ಒಗ್ದು...ಯೂನಿಫಾರಂ ಒಗ್ದು...ತಿಗಣೆ ಮನೇಲಿ ತನ್ನ ಕುಟುಂಬ ಸ್ಥಾಪನೆ ಮಾಡಿಲ್ಲ ಅಂತ ಗೊತ್ತಾಗೋವರ್ಗೂ ನನ್ನನ್ನ ಮಂಚದ ಹತ್ರ ಸುಳಿಯಗೊಡಲಿಲ್ಲ.ಸ್ಕೂಲ್ ಗೆ ಅವ್ರೇ ಹೋಗಿ ಬೆಂಚ್ ಕ್ಲೀನ್ ಆಗಿ ಇಡೋ ವರ್ಗೂ ನನ್ ಮಗಳನ್ನ ಸ್ಕೂಲ್ ಗೆ ಕಳ್ಸಲ್ಲ ಅಂತ ಖಡಾಖಂಡಿತವಾಗಿ ಹೇಳಿಬಂದಿದ್ದರು.ಒಂದ್ ವಾರ ಮನೇಲಿ ಮಜಾ ಮಾಡಿದೆ !

ಸೊಗಸಾದ ಲೇಖನ.

sunaath said...

ಅಹಾ! ತಿಗಣೆ ಸಂತತಿ ಸಾವಿರ(ದ)ವಾಗಲಿ!
ಬೇಂದ್ರೆ ಒಂದು ಸುಂದರವಾದ ಅಣಕುವಾಡು ಬರೆದಿದ್ದಾರೆ:
"ಒರದಾ ತಗಣಿ ಒರೆದಾ!" ಅಂತ.
ನಿಮ್ಮಿಂದ delightful ಹರಟೆ ಬರೆಯಿಸಿದ ತಿಗಣೆಗಳಿಗೆ ನನ್ನ ಅಭಿನಂದನೆಗಳು.

Nempu Guru said...

ನೆಗಾಡಿ... ನೆಗಾಡಿ ಸುಸ್ತಾಯ್ತ್... ಬಲ್ಯಾ...!!!! :-)

Sree said...

ಎಲ್ಲಕ್ಕಿಂತ ಬೆಶ್ಟು ತಿಗಣೆ ಸರ್ವೀಸು ನಮ್ಮ ಘನಸರ್ಕಾರದ ರಾಜಹಿಂಸೆ ಬಸ್ಸುಗಳಲ್ಲಿ ರಾಜ್ಯಾದ್ಯಂತ ಎಲ್ಲ ಮಾರ್ಗಗಳಲ್ಲೂ ಲಭ್ಯವಿದೆ, ಟ್ರೈ ಮಾಡಿ ನೋಡಿ!;)

urbhat [Raj] said...

ಅದು ಯಾವ್ಯಾವ ಕಂಪನಿಯ, ನಂಬರಿನ, ಕಲರಿನ ಬಸ್ಸಿನಲ್ಲಿ...ಆ ಬಗ್ಸ್ ಇದೆ ಅಂತ ಲಿಷ್ಟು ಕೊಟ್ಟರೆ ನಮಗೂ ಸ್ವಲ್ಪ ಅನುಕೂಲ ಆಗಬಹುದೇನೋ..

ವಿ.ರಾ.ಹೆ. said...

ಹ್ಹೆ ಹ್ಹೆ.

ಮಜವಾಗಿತ್ತು ಚವಣೆ ಪ್ರಸಂಗೆ.

ನಮ್ ಸರ್ಕಾರದವರು ರಾಜಹಂಸ ಬಸ್ಸುಗಳಲ್ಲಿ ತಿಗಣೆ ಸಾಕಣೆ ನೆಡೆಸಿದ್ದರು ಸ್ವಲ್ಪ ದಿನ. :)

Shubhada said...

ಮನಸ್ವಿನಿ,
ನೀವೇ ಕರೆಕ್ಟು. ಕನ್ನಡ ರತ್ನಕೋಶದಲ್ಲಿ ನಾಗವಂದಿಗೆ ಅನ್ನೋ ಪದಾನೇ ಇಲ್ಲ :-) ನಾಗಂದಿಗೆ ಅನ್ನೋದೇ ಸರಿಯಾದ ರೂಪ. ಬಿಡಿ, ನಾನು ಪಂಡಿತಪುತ್ರಿ ಎಷ್ಟಂದ್ರೂ ;-)

ಲಕ್ಷ್ಮಿ,
ಸ್ವಾಗತ. ನಿಮ್ಮ ತಿಗಣೆ ಅನುಭವ ಸಕತ್ತಾಗಿದೆ :-)

ಸುನಾಥ ಕಾಕಾ,
ತಿಗಣೆ ಸಂತತಿ ಸಾವಿರ ಅಲ್ಲ, ಲಕ್ಷ ಆಗ್ಲಿ. ಆದ್ರೆ ಬಸ್ಸಲ್ಲಿ ಮಾತ್ರ ಬೇಡ ;-) ಏನಂತೀರಿ?

ಗುರು,
:-)

ಶ್ರೀ & ವಿಕಾಸ್
ಸ್ವಾಗತ. ರಾಜಹಂಸವೂ ತಿಗಣೆ ಸಾಕಣಾ ಕೇಂದ್ರ ಆಗಿದೆ ಅಂತ ಗೊತ್ತಿರ್ಲಿಲ್ಲ ನಂಗೆ :-)

ರಾಜೇಂದ್ರ,
ಯಾವ ಬಸ್ಸಲ್ಲಿ ಇದೆ ಅಂತ ಹೇಳೊ ಬದ್ಲು ಯಾವ ಬಸ್ಸಲ್ಲಿ ಇಲ್ಲ ಅಂತ ಲಿಸ್ಟ್ ಮಾಡೋದೇ ವಾಸಿ ಅನ್ಸುತ್ತೆ :-)

Unknown said...

ನಾಗಂದಿಗೆ,ನಾಗವಂದಿ