Friday, May 30, 2008

ವನಸುಮ

‘ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೆ, ಹೇ ದೇವಾ...’

ಚಿಕ್ಕಂದಿನಿಂದ ಅಪ್ಪನ ಕಂಠದಿಂದ ಸದಾ ಕೇಳಿಸಿಕೊಳ್ಳುತ್ತಿದ್ದ ಹಾಡಿದು. ಅಪ್ಪ ಯಕ್ಷಗಾನ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದವರಾಗಿದ್ದರಿಂದ, ವೇಷಗಾರಿಕೆ, ಭಾಗವತಿಕೆ, ಮದ್ದಲೆ ಅಂತ ಆ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿಗೆ ಕೈಯಾಡಿಸಿದವರೂ ಆಗಿದ್ದರಿಂದ ಅವರು ಹಾಡುವ ಹಾಡುಗಳೆಲ್ಲ ಭಾಗವತರ ಪದಗಳಂತೆ ಇರುತ್ತವೆ ಅಂತ ನಾನು ಸದಾ ಅವರನ್ನು ಛೇಡಿಸುವುದಿದೆ. ಕೆಲವೊಮ್ಮೆ ಅವರು ಸುಮ್ಮನೆ ಶಾಸ್ತ್ರೀಯ ಹಾಡುಗಳನ್ನೋ, ಅಪ್ಪಟ ಸಿನಿಮಾ ಹಾಡುಗಳನ್ನೋ ಹಾಡುತ್ತಿದ್ದರೂ ಅದು ಯಕ್ಷಗಾನದ್ದೇ ಪದವೇನೋ ಅನ್ನಿಸುವುದಿದೆ ನನಗೆ! ಹಾಗೇ ಈ ಹಾಡನ್ನೂ ನಾನು ಬಹುಕಾಲ ಯಾವುದೋ ಯಕ್ಷಗಾನದ ಪದ ಅಂತಲೇ ಅಂದುಕೊಂಡಿದ್ದೆ.

‘ಜನಕೆ ಸಂತಸವೀವ ಘನನು ನಾನೆಂದೆಂಬ ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ...’

ಅನ್ನುತ್ತ ಅಪ್ಪ ಆವತ್ತೊಮ್ಮೆ ಭಾವಪೂರ್ಣವಾಗಿ ಹಾಡಿಕೊಳ್ಳುತ್ತಿರಬೇಕಾದರೆ ಆ ಸಾಲುಗಳು ನನ್ನನ್ನು ಬಹುವಾಗಿ ಆಕರ್ಷಿಸಿಬಿಟ್ಟುವು. "ಯಾವ ಯಕ್ಷಗಾನದ ಹಾಡಪ್ಪಯ್ಯ ಇದು? ಒಂಥರಾ ಚೆನ್ನಾಗಿತ್ತು?" ಅಂತಲೇ ಕೇಳಿದೆನಿರಬೇಕು! ಅಪ್ಪಯ್ಯ ನಗುತ್ತ, "ಅಲ್ಲ ಮಾರಾಯ್ತಿ. ಇದು ಯಕ್ಷಗಾನದ್ದಲ್ಲ. ನನ್ನ ಚಿಕ್ಕಂದಿನಲ್ಲಿ ನನ್ನನ್ನು ತುಂಬ ಪ್ರಭಾವಿಸಿದ ಪದ್ಯ" ಅನ್ನುತ್ತ ಕವನದ ಪೂರ್ಣ ಪಾಠ ಒಪ್ಪಿಸಿ, ಅದರ ಅರ್ಥವನ್ನೂ ವಿವರಿಸಿದರು.

ವನಸುಮದೊಲೆನ್ನ ಜೀ-
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೆ, ಹೇ ದೇವಾ

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ-
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎ-
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾ-
ದಪದಂತೆ ನೈಜಮಾದೊಳ್ವಿನಿಂ ಬಾಳ್ವವೊಲು

ತಮ್ಮ ಹರೆಯದಲ್ಲಿ ಅಪ್ಪ ಅವರಮ್ಮನ ಮನೆಗೆ ಕಾಡುದಾರಿಯಲ್ಲಿ ಮೈಲುಗಟ್ಟಲೆ ಒಬ್ಬರೇ ನಡೆದುಕೊಂಡು ಹೋಗಬೇಕಾದಾಗ ಈ ಹಾಡನ್ನು ಗಟ್ಟಿಯಾಗಿ ಹಾಡಿಕೊಳ್ಳುತ್ತಿದ್ದರಂತೆ. ಈ ಹಾಡಿನ ‘ವನಸುಮ’ದಂತೆ ತಾನಾಗಬೇಕು, ತನ್ನಿಂದಾದಷ್ಟು ಕೆಲಸಗಳನ್ನು ಮಾಡಿ ನಿರಹಂಕಾರಿಯಾಗಿರಬೇಕು, ಉಪಕಾರ ಮಾಡಲಾಗದಿದ್ದರೆ ಬೇರೆಯವರಿಗೆ ಅಪಕಾರವನ್ನಾದರೂ ಮಾಡದಂತಿದ್ದು ದೀನನಾಗಿರಬೇಕು ಅನ್ನುವ ಮನೋಧರ್ಮವನ್ನು ರೂಪಿಸುತ್ತಿದ್ದ ಹಾಡು, ಅಪ್ಪನ ಕಂಚಿನ ಕಂಠದಿಂದಾಗಿ ಕಾಡುಪ್ರಾಣಿಗಳನ್ನೂ ದೂರವಿಡುತ್ತಿತ್ತಂತೆ! ಅಧ್ಯಾತ್ಮದಂಥ ಕ್ಲಿಷ್ಟ ವಿಷಯಗಳನ್ನೂ ಸರಳವಾಗಿ ವಿವರಿಸಬಲ್ಲ ಡಿ. ವಿ. ಗುಂಡಪ್ಪನಂಥವರು ಮಾತ್ರ ಇಂಥ ಅದ್ಭುತ ಹಾಡುಗಳನ್ನು ಬರೆಯಬಹುದು ಅಂತ ಷರಾ ಕೂಡ ಕೊಟ್ಟರು ಅಪ್ಪ. ನಾನೂ ನನ್ನದೇ ರಾಗದಲ್ಲಿ ಹಾಡಿಕೊಂಡು ಆ ದೀನಭಾವವನ್ನು ಅನುಭವಿಸಿದೆ.

ವಿಶೇಷ ಅಂದರೆ, ಅಪ್ಪ ಕಲಿಯುವಾಗ ೬ ನೇ ತರಗತಿಯಲ್ಲೂ, ಕಲಿಸುವಾಗ ೮ರಲ್ಲೂ ಪಠ್ಯಸಾಹಿತ್ಯವಾಗಿದ್ದ ಈ ಹಾಡು ನಾನು ಕಲಿಯುವಾಗ ಯಾವ ತರಗತಿಯಲ್ಲೂ ಇರಲೇ ಇಲ್ಲ. ಸಣ್ಣ ವಿಷಯವನ್ನೂ ಜಾಹೀರಾತು ಕೊಟ್ಟುಕೊಂಡೇ ಜಗತ್ತಿಗೆ ತಿಳಿಸಲು ಹವಣಿಸುವ ಪ್ರಚಾರಯುಗದ ನಮ್ಮ ಪೀಳಿಗೆಗೆ ಈ ಹಾಡು ಅರ್ಥವಾಗಲಾರದು ಅಂತಲೋ, ಪ್ರತ್ಯುಪಕಾರದ ನಿರೀಕ್ಷೆಯಲ್ಲೇ ಉಪಕಾರ ಮಾಡುವ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಥ ಹಾಡು ಅಪ್ರಸ್ತುತ ಅಂತಲೋ ತೆಗೆದುಹಾಕಿರಬಹುದು ಪ್ರಾಯಶಃ.

12 comments:

Sushrutha Dodderi said...

"ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ..."

ಆಹ! ಡಿವಿಜಿಗೆ ಜೈ!

sunaath said...

ಈ ಪದ್ಯ ನನಗೆ ತುಂಬ ಇಷ್ಟವಾದದ್ದು. ಬಹಳ ದಿನಗಳ ನಂತರ ಈ ಪದ್ಯವನ್ನು ಮತ್ತೊಮ್ಮೆ ಪೂರ್ತಿಯಾಗಿ ಓದುವ ಅವಕಾಶ ಮಾಡಿಕೊಟ್ಟದ್ದಕ್ಕಾಗಿ ತುಂಬಾ thanks,ಶುಭದಾ!
-ಸುನಾಥ ಕಾಕಾ

Shubhada said...

ಸುಶ್ರುತ,
ಜೈ! :-)

ಕಾಕಾ,
ಧನ್ಯವಾದಗಳು :-)

ತೇಜಸ್ವಿನಿ ಹೆಗಡೆ said...

ಈ ಕವನ ನನಗೂ ತುಂಬಾ ಇಷ್ಟ. ದಿನಕರ ದೇಸಾಯಿಯವರೂ ಇಂತಹದೇ ಅರ್ಥನೀವ ಇಷ್ಟೇ ಸುಂದರ ಕವನವೊಂದನ್ನು ರಚಿಸಿದ್ದಾರೆ. ನೀವೂ ಓದಿರಬಹುದು "ಎನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ......"

Jagali bhaagavata said...

ಭಾಗವತರ ಬಗ್ಗೆ ಏನೋ ಬರ್ದಿದ್ದೆ ಅಂತ ಇಲ್ಲಿಗೆ ಬಂದ್ರೆ.... :-)

ಏನಾದ್ರೂ ಒಳ್ಳೆಯದು ಬರೀಬೇಕು ಅಂದಾಗೆಲ್ಲ ಇಂದಿನ ಪೀಳಿಗೆಯನ್ನ, ಇಂದಿನ ಕಾಲವನ್ನ ತೆಗಳಲೇಬೇಕಾ?...ಛೇ..ಛೇ...ಕಂಡಾಪಟ್ಟೆ ವಯಸಾಗ್ಬಿಟ್ರೆ ಇದೇ ಆಗೋದು :-)

ಸುಪ್ತದೀಪ್ತಿ suptadeepti said...

ಸುಂದರ ಅರ್ಥಪೂರ್ಣ ಕವನ ಇದು, ನನಗೂ ಇಷ್ಟ. ಧನ್ಯವಾದ ಶುಭದ.

Shubhada said...

ತೇಜಸ್ವಿನಿ,
ಸ್ವಾಗತ. ಆ ಕವನ ಓದಿಲ್ಲ ನಾನು :-). ಸಿಕ್ಕರೆ ಖಂಡಿತ ಓದುವೆ. ಧನ್ಯವಾದ.

ಭಾಗವತರೇ,
ತಪ್ಪಾಯ್ತು. ನಿಮ್ಮಂಥ ಒಳ್ಳೇ (?) ಜನ ಈ ಪೀಳಿಗೆಯೋರು ಅಂತ ಮರ್ತೇ ಹೋಗಿತ್ತು ನಂಗೆ! ಏನ್ಮಾಡೋದು ವಯಸ್ಸಾಯ್ತಲ್ಲ ;-)

ಜ್ಯೋತಿ ಅಕ್ಕ,
ಥ್ಯಾಂಕ್ಸ್ :-)

Jagali bhaagavata said...

ಆಯ್ಯೋ, ನಾನ್ಯಾವ ಸೀಮೆ ಒಳ್ಳೇ ಜನ? ಆದ್ರೆ, ಆಗಿನ ಕಾಲನೇ ನೋಡ್ದೆ ಇರೋ ನನ್ನಂಥ ನಿನ್ನಂಥ ಜನ ಕಾಲ ಕೆಟ್ಟೋಯ್ತು ಅನ್ಬೇಕಾದ್ರೆ...:-))

Shubhada said...

ha ha :-D ya, this I must obey bhagvat :-)

Tina said...

ಶುಭದಾ,
ನಾನು ಓದುವಾಗ ಈ ಕವಿತೆ ಇತ್ತು, ಯಾವ ಕ್ಲಾಸಿನಲ್ಲಿ ಅಂತ ನೆನಪಿಲ್ಲ. ಆದರೆ ಇದನ್ನ ಕಂಠಪಾಠ ಸ್ಪರ್ಧೆಯಲ್ಲಿ ಹೇಳಿ ಪ್ರೈಜು ಗಿಟ್ಟಿಸಿದ್ದು ಚೆನ್ನಾಗಿ ನೆನಪಿದೆ. ಇನ್ನೂ ನನಗೆ ಇದು ಆಗ ಹೇಳುತ್ತಿದ್ದ ಸ್ಕೂಲುಮಕ್ಕಳ ಶೈಲಿಯಲ್ಲಿಯೇ ಪೂರ್ತಿ ನೆನಪಿದೆ.
ಆದರೆ ಕವಿತೆಯ ಮೊದಲನೆ ಸಾಲು
’ವನಸುಮದೊಳೆನ್ನ’ ಅಲ್ಲ, ’ವನಸುಮದೊಲೆನ್ನ’ ಎಂದಾಗಬೇಕು.
ಹಾಗೆಯೆ ’ವಿಪುಲಾಶ್ರಯವೀವ’ ಅನ್ನುವುದು ’ವಿಪುಲಾಶ್ರಯವನೀವ’ ಎಂದು ಇದ್ದಹಾಗೆ ನೆನಪು. ನನ್ನ ತಪ್ಪಿದ್ದರೆ ದಯವಿಟ್ಟು ಕ್ಷಮಿಸಿರಿ. ಆಗಿನ ದಿನಗಳ ನೆನಪು ಗೋಜಲಾಗಿದ್ದರೂ ಇರಬಹುದು. ಅಂತೂ ನಿಮ್ಮ ಬರಹ ಬಹಳ ದಿನಗಳ ಮೇಲೆ ಹಳೆಯ ಸವಿನೆನಪುಗಳನ್ನೂ, ನನ್ನ ಕನ್ನಡ ಗುರುಗಳ ಪ್ರೀತಿಯನ್ನೂ ನೆನಪಿಸಿತು.
ಪ್ರೀತಿಯೊಡನೆ, ಟೀನಾ.

Shubhada said...

ಟೀನಾ ಮೇಡಂ,

‘ವಿಪುಲಾಶ್ರಯವೀವ’ ದ ಬಗ್ಗೆ ನನಗೂ ಸಂಶಯ ಇತ್ತು. ಆದರೆ ‘ವನಸುಮದೊಲೆನ್ನ’ ಸರಿಯಾದ ಶಬ್ದ ಅಂತ ಖಂಡಿತಾ ಗೊತ್ತಿರಲಿಲ್ಲ. ಈಗ ತಿದ್ದಿಕೊಂಡೆ :-) ಇಲ್ಲಿ ಬಂದು ಕಮೆಂಟಿಸಿ ತಪ್ಪುಗಳನ್ನ ತಿದ್ದಿದ್ದಕ್ಕೆ ಪ್ರೀತಿಯ ಧನ್ಯವಾದಗಳು:-)

Venkatesha Murthy said...

tumba chennagide. nimma thande'avara bagge keli tumba santosha haagu avra bagge mattashtu tilidukollalu mattashtu kutoohala bantu. avara bagge mattashtu tilisi. antha hiriyara avashyakathe nammantha yuvajanakke bahala avashyakathe ide.