ಅವಳು ಅಂಗಳದಲ್ಲಿ ಬಿಡಿಸುತ್ತಿದ್ದ ಅಂದದ ರಂಗೋಲಿಯನ್ನು ನೋಡುತ್ತಿದ್ದವನಿಗೆ, ಚುಕ್ಕಿಗಳ ಮೇಲೆ ರಂಗೋಲಿಯ ಗೆರೆಗಳು ಹೇಗೆ ಸುಂದರವಾಗಿ ಅರಳುತ್ತವೆಯೋ ಅದೇ ರೀತಿ ಹಣದ ಆಧಾರದ ಮೇಲೆ ನಮ್ಮ ಜೀವನ ರೇಖೆ ಸಾಗುತ್ತದೆ ಅನಿಸಿತು. ಅದನ್ನೇ ಅವಳಿಗೂ ಹೇಳಿದ. "ಆದರೆ ಚುಕ್ಕಿಗಳೇನು ಅನಿವಾರ್ಯವಲ್ಲ. ನಾನಿವತ್ತು ಚುಕ್ಕಿಗಳನ್ನೇ ಇಟ್ಟಿಲ್ಲ. ಬರಿಯ ಎಳೆಗಳಿಂದಲೇ ರಂಗೋಲಿ ಬರೆದೆ. ನೀವು ಗಮನಿಸಲೇ ಇಲ್ಲವೆ?!" ಅನ್ನುತ್ತ ಅವಳು ನಕ್ಕುಬಿಟ್ಟಳು.
***
ಅದೇನೋ ಗಡಿಬಿಡಿಯ ಕೆಲಸ ಮಾಡುತ್ತಿದ್ದವಳ ಫೋನ್ ರಿಂಗಾಯ್ತು. ಫೋನಲ್ಲಿ ಅಮ್ಮನ ಹೆಸರು ಕಂಡಿದ್ದೇ ಯಾಕೋ ಪಿತ್ತ ನೆತ್ತಿಗೇರಿ "ಅಮ್ಮ, ಸಿಕ್ಕಾಪಟ್ಟೆ ಕೆಲಸ ಇದೆ ನಂಗೆ. ನೀನು 'ಮಗೂಗೆ ಸ್ವರ್ಣಪ್ರಾಶನ ಮಾಡಿಸು, ಪುಷ್ಯ ನಕ್ಷತ್ರ ಇವತ್ತು' ಅಂತ ನೆನಪು ಮಾಡಿಸೋಕೆ ಫೋನ್ ಮಾಡಿದ್ದಾಗಿದ್ರೆ ಫೋನ್ ಇಟ್ಟು ಬಿಡು. ನೆನಪಿದೆ ನಂಗೆ, ಕರ್ಕೊಂಡು ಹೋಗ್ತೀನಿ ಆಮೇಲೆ. ನನ್ನ ಮಗನ ಕಾಳಜಿ ಮಾಡೋಕೆ ನನಗೆ ಗೊತ್ತು..." ಅಂತ ಒಂದೇ ಉಸಿರಿಗೆ ಬಡಬಡಿಸಿದಳು. ಅಮ್ಮ ಆ ಕಡೆಯಿಂದ ತಣ್ಣಗೆ ಅಂದರು, "ಇಲ್ಲ ಕಣೇ. ದಿನಾ ತಲೆನೋವು, ಡಾಕ್ಟರ್ ಹತ್ತಿರ ಹೋಗ್ಬೇಕು ಅಂತಿದ್ಯಲ್ಲ ನೀನು? ಹೋಗಿದ್ಯಾ ಅಂತ ಕೇಳೋಕೆ ಫೋನ್ ಮಾಡಿದೆ...".
***
"ನಿಮಗೆ ಗಾಂಧೀಜಿ ಇಷ್ಟವೋ, ಭಗತ್ ಸಿಂಗನೋ?". ಬಹಳ ಕಷ್ಟದ ಪ್ರಶ್ನೆ. ನಾನೆಂದೆ, "ನಿಮಗೆ ಆನೆಪಟಾಕಿ ಇಷ್ಟವೋ, ನಕ್ಷತ್ರ ಕಡ್ಡಿಯೋ?"
***
ಅದ್ಯಾರು ಯಾಕೆ ಗಂಟು ಹಾಕಿದರೋ? ನನ್ನದೂ, ನನ್ನ ಹೆಂಡತಿಯದೂ ಎಲ್ಲದರಲ್ಲೂ ಪರಸ್ಪರ ವಿರುದ್ಧ ದಿಕ್ಕು. ನಾನು ಕಾಫಿಯಾದರೆ ಅವಳು ಟೀ. ಅವಳಿಗೆ ಸಿಹಿ ಇಷ್ಟ, ನನಗೋ ಖಾರವೇ ಪ್ರಧಾನ. ಅವಳದು ಆಧುನಿಕ ವಿಚಾರಧಾರೆಯಾದರೆ ನಾನಿನ್ನೂ ಅವಳಿಗೆ ಹೋಲಿಸಿದರೆ ಹಳೆಯ ಕಾಲದವನೇ. ಆಕೆ ನನ್ನಷ್ಟು ಓದಿಕೊಂಡಿರದಿದ್ದರೂ ಗೊತ್ತಿರುವುದನ್ನು ಅದ್ಭುತವಾಗಿ ಪ್ರಸ್ತುತ ಪಡಿಸುತ್ತಾಳೆ. ನನಗೋ ಅದ್ಭುತವೆನಿಸುವ ವಿಷಯಗಳೆಷ್ಟೋ ಗೊತ್ತಿದ್ದರೂ ಅದರ ಬಗ್ಗೆ ಚೆನ್ನಾಗಿ ಹೇಳಲಾರೆ. ಆದರೆ ಆಕೆ ಅದು ಹೇಗೋ ನನ್ನ ಬಾಯಿ ಬಿಡಿಸಿ ನನ್ನ ವಿಚಾರಗಳನ್ನೇ ಪೋಣಿಸಿ ಬರೆದ ಕಾದಂಬರಿ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿ ನಮ್ಮಿಬ್ಬರ ಮೇಲೆ ಪ್ರಶಂಸೆಯ ಸುರಿಮಳೆಯೇ ಹರಿಯಿತು. ಯಾಕೆ ನಮ್ಮಿಬ್ಬರನ್ನು ಒಂದುಗೂಡಿಸಿರಬಹುದು ಅನ್ನುವ ಪ್ರಶ್ನೆಗೆ ಹೀಗೆ ಉತ್ತರ ಸಿಕ್ಕ ಮೇಲೆ ನಮ್ಮ ಬದುಕು ಸುಂದರ ಪ್ರೇಮಕಾವ್ಯವಾಯ್ತು.
***
ಮುದ್ದು ಮಾಡಿ, ಯಾಮಾರಿಸಿ, ಹೆದರಿಸಿ ಬೆದರಿಸಿ ಎಷ್ಟು ಕತೆ ಹೇಳಿದರೂ ೩ ವರ್ಷದ ಮಗ ಊಟ ಮಾಡುತ್ತಿಲ್ಲ. ಅವಳ ಸಿಟ್ಟು ತಾರಕಕ್ಕೇರಿ ನಾಲ್ಕೇಟು ಬಿಗಿದವಳು, ಅವ ಸೂರು ಕಿತ್ತುಹೋಗುವ ಹಾಗೆ ಕಿರುಚಿಕೊಂಡ ತಪ್ಪಿಗೆ ಮೇಲೆರಡು ಹೇರಿ ದುಸುಮುಸು ಅನ್ನುತ್ತ ರೂಮಿಗೆ ಬಂದುಬಿಟ್ಟಳು. ೨ ನಿಮಿಷ ತನ್ನಷ್ಟಕ್ಕೆ ಅತ್ತ ಅವ ಅಮ್ಮನೇ ಹೊಡೆದಿದ್ದು ಅಂತ ಗೊತ್ತಿದ್ದರೂ "ಅಮ್ಮಾ.... ಎತ್ಕೋ.... ನಾ ಮಮ್ಮಮ್ ಮಾತೀನಿ" ಅನ್ನುತ್ತ ಮತ್ತೆ ಅಮ್ಮನ ಬಳಿಯೇ ಬಂದಾಗ ಅವಳ ಹೃದಯ ಅವನ ಅಳುಗಣ್ಣಿನಷ್ಟೇ ಪರಿಶುದ್ಧವಾಗಿಬಿಟ್ಟಿತು.
***
"ಬೆಳಿಗ್ಗೆ ಬೇಗ ಎಬ್ಬಿಸಿ 'ತಡವಾಗುತ್ತೆ, ಬೇಗ ಎದ್ದು ತಿಂಡಿ ಮಾಡಿಕೊಡೇ' ಅಂದರೆ 'ರಾತ್ರಿಯೆಲ್ಲ ಆಫೀಸ್ ಕೆಲಸ ಮಾಡಿ ಲೇಟಾಗಿ ಮಲಗಿದ್ದೀನಿ. ಕರುಣೆನೇ ಇಲ್ದೆ ದೂಡಿ ದೂಡಿ ಎಬ್ಬಿಸ್ತೀರ, ನಿದ್ದೆ ಮಾಡೋಕೇ ಬಿಡಲ್ಲ' ಅಂತ ದಿನವೆಲ್ಲ ಗೊಣಗಾಡುತ್ತೀಯ. ಹಾಗಂತ ಹೋಗ್ಲಿ ಪಾಪ ಮಲಕ್ಕೊಳ್ಲಿ ಅಂತ ತಿಂಡಿ ತಿನ್ನದೇ ಹೋದರೆ 'ಯಾಕೆ ನನ್ನ ಬೇಗ ಎಬ್ಬಿಸಿಲ್ಲ? ತಿಂಡಿ ಮಾಡ್ಕೊಡ್ತಿರ್ಲಿಲ್ವಾ?' ಅಂತ ಅದಕ್ಕೂ ನನ್ನನ್ನೇ ಬಯ್ಯುತ್ತೀಯ. ಹಾಗೆ ಮಾಡಿದರೂ ತಪ್ಪು, ಹೀಗೆ ಮಾಡಿದರೂ ತಪ್ಪು ಅಂದರೆ ಬಡಪಾಯಿ ನಾನೇನು ಮಾಡಬೇಕು ನೀನೇ ಹೇಳು..." ಅವನು ಅಲವತ್ತುಕೊಂಡ. ಅವಳಿಗೂ ಹೌದಲ್ಲವೆ ಅನಿಸಿ ನಗು ಬಂದು ಲಲ್ಲೆಗರೆಯುತ್ತ ಹೇಳಿದಳು, "ನಾನೇನು ಮಾಡಲಿ ಹೇಳಿ? ನೀವು ಬೆಳಗಿನ ಸುಖನಿದ್ದೆಯಿಂದ ಎಬ್ಬಿಸಿದಾಗ ಕಷ್ಟವಾಗೋದು ನಿಜ. ಆದರೆ ನೀವಿನ್ನೂ ಹಸಿದುಕೊಂಡಿದ್ದೀರಿ ಅಂತ ಗೊತ್ತಾದಾಗ ನನ್ನ ಹೊಟ್ಟೆಯಲ್ಲೂ ಸಂಕಟವಾಗುತ್ತೆ..."
***
No comments:
Post a Comment