Sunday, March 9, 2008

ರಸ್ತೆ ದಾಟುವಾಗ...

ಹಾಗಂತ ನನಗೆ ರಸ್ತೆ ದಾಟುವಾಗ ಭಯವೇನೂ ಆಗುವುದಿಲ್ಲ. ಆದರೂ ರಸ್ತೆ ದಾಟುವಾಗೆಲ್ಲ ನನ್ನ ಕೈ ಪಕ್ಕದಲ್ಲಿರುವವರ ಕೈ ಹಿಡಿದುಕೊಳ್ಳಲು ಹವಣಿಸುತ್ತಿರುತ್ತದೆ! (ಬಹುಶಃ ಬಾಲ್ಯದಲ್ಲಿ ಅಪ್ಪ ರಸ್ತೆ ದಾಟಿಸುವಾಗ ಕಿರು ಬೆರಳನ್ನು ಹಿಡಿದುಕೊಳ್ಳುತ್ತಿದ್ದುದರ ಪ್ರಭಾವ ಇರಬೇಕು). ನನ್ನ ಆತ್ಮೀಯ ಬಂಧುಗಳೊಂದಿಗೆ ಹೋಗುವಾಗಂತೂ ಯಾವುದೇ ಮುಲಾಜಿಲ್ಲದೆ ಅವರ ಕೈ (ಕೊಕ್ಕೆ ಹಾಕಿ!) ಹಿಡಿದುಕೊಂಡಿರುತ್ತೇನೆ. ನನ್ನ ಈ (ಕೆಟ್ಟ) ಅಭ್ಯಾಸ ಗೊತ್ತಿರುವ ಗೆಳತಿಯರು ತಾವೇ ನನ್ನ ಕೈ ಎಳೆದು, ‘ರಸ್ತೆ ದಾಟಬೇಕಲ್ಲ, ಕೈ ಹಿಡಿದುಕೋ ಪುಟ್ಟಾ..’ ಅಂತ ತಮಾಷೆ ಮಾಡುತ್ತಾರೆ. ನನಗೇನೂ ಬೇಜಾರಿಲ್ಲ ಬಿಡಿ, ಸಧ್ಯ, ಕೈ ಹಿಡಿದುಕೊಂಡರಲ್ಲ ಅಂತ ಸಮಾಧಾನವಾಗುತ್ತೆ!

ಹಾಗಂತ ಒಬ್ಬಳೇ ರಸ್ತೆ ದಾಟುವಾಗ ಯಾರದೋ ಕೈ ಹಿಡಿಯ ಹೋಗುವುದಿಲ್ಲ ಬಿಡಿ. ಎಡ, ಬಲ, ಹಿಂದೆ, ಮುಂದೆ ಎಲ್ಲ ನೋಡಿ, (ಒನ್ ವೇ ಆಗಿದ್ದರೂ ಎರಡೂ ಬದಿ ನೋಡಿಕೊಂಡು) ಅವಸರದಲ್ಲಿರುವ ಸವಾರರಿಗೆಲ್ಲ ಹೋಗ ಬಿಟ್ಟು ಆಮೇಲೆ ಜಾಗ್ರತೆಯಾಗಿ ರಸ್ತೆ ದಾಟಿ ನಿಟ್ಟುಸಿರೆಳೆಯುತ್ತೇನೆ.

ಒಮ್ಮೆ ಹೀಗಾಯಿತು. ನಾನು ತಾತ್ಕಾಲಿಕ ನೆಲೆಯಲ್ಲಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸಂದರ್ಭ. ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಡೆಯುತ್ತಿದ್ದುವು. ಅವರನ್ನು ಸ್ಪರ್ಧಾ ಸ್ಥಳಗಳಿಗೆ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ತಾತ್ಕಾಲಿಕ ಶಿಕ್ಷಕಿಯರಾಗಿದ್ದ ನನಗೆ ಹಾಗೂ ನನ್ನ ಗೆಳತಿಗೆ ಒಪ್ಪಿಸಿದರು. ನಾವೂ ಖುಶಿಯಿಂದಲೇ ಒಪ್ಪಿಕೊಂಡೆವು. ನಮಗಿಂತ ಹೆಚ್ಚೆಂದರೆ ೫-೬ ವರ್ಷ ಚಿಕ್ಕವರಾಗಿದ್ದ ಮಕ್ಕಳೊಂದಿಗೆ ಚೆನ್ನಾಗಿ ಹರಟೆ ಹೊಡೆಯುತ್ತಾ ಪಿಕ್‍ನಿಕ್ ಹೋಗುವ ಅವಕಾಶ ಇದು ಅಂತ.

ಜಿಲ್ಲಾ ಮಟ್ಟದ ಸ್ಪರ್ಧೆಗಳು ಸ್ವಲ್ಪ ದೂರದ ಸ್ಥಳದಲ್ಲಿದ್ದುದರಿಂದ ಬಸ್ಸಲ್ಲಿ ಹೋಗಬೇಕಾಯಿತು. ಬಸ್ಸಿಳಿದದ್ದೇ ರಸ್ತೆ ದಾಟಬೇಕಿತ್ತು. ಯಥಾಪ್ರಕಾರ ನನ್ನ ಕೈ ಪಕ್ಕದಲ್ಲಿದ್ದ ಯೂನಿಫ಼ಾರ್ಮ್ ಹಾಕಿದ್ದ ಹುಡುಗಿಯ ಕೈಯನ್ನ ಹಿಡಿದುಕೊಂಡಿತು. ಯಾಕೋ ಆ ಹುಡುಗಿ ಕೈ ಜಗ್ಗುವುದಕ್ಕೆ ಶುರು ಮಾಡಿದಂತಾಯಿತು. ರಸ್ತೆಯಲ್ಲಿದ್ದ ವಾಹನಗಳನ್ನೇ ಗಮನಿಸುತ್ತ ರಸ್ತೆ ದಾಟಲು ಹವಣಿಸುತ್ತಿದ್ದ ನನಗೆ ಇದರಿಂದ ಸಿಟ್ಟು ಬಂತು. ‘ಅಲ್ಲ, ಈ ಮಕ್ಕಳಿಗೆ ಸ್ವಲ್ಪ ಸಲಿಗೆ ಕೊಟ್ಟರೆ ತಲೆ ಮೇಲೇ ಕೂತುಕೊಂಡು ಬಿಡ್ತಾರೆ. ನಾನಿವಳ ಟೀಚರ್, ಕೈ ಹಿಡಿದುಕೊಂಡರೆ ಕೈ ಜಗ್ಗುತ್ತಾಳಲ್ಲ, ಎಷ್ಟು ಧೈರ್ಯ?!’ ಅಂತ ಮನಸ್ಸಲ್ಲೇ ಬಯ್ಯುತ್ತ ಅವಳನ್ನ ದರದರನೆ ಎಳೆದುಕೊಂಡು ಈ ಕಡೆ ಬಂದು ಬಿಟ್ಟೆ.

ಬಂದ ಮೇಲೆ ನೋಡುವುದೇನು? ನಮ್ಮ ಮಕ್ಕಳೆಲ್ಲ ನಗು ತಾಳಲಾಗದೆ ಇನ್ನೂ ರಸ್ತೆಯ ಆ ಬದಿಯಲ್ಲೆ ನಿಂತು ನನ್ನ ಗೆಳತಿಯೊಂದಿಗೆ ನಗುತ್ತಿದ್ದಾರೆ! ಪಾಪ, ನಾನು ಕರೆದುಕೊಂಡು ಬಂದ (ಎಳೆದುಕೊಂಡು ಬಂದ), ನಮ್ಮ ಮಕ್ಕಳಂತದೇ ಯೂನಿಫ಼ಾರ್ಮ್ ಹಾಕಿದ್ದ ಯಾವುದೋ ಬೇರೆ ಶಾಲೆಯ ಹುಡುಗಿ ನಗು-ಭಯ ಎರಡೂ ಮಿಶ್ರಿತವಾದ ದೃಷ್ಟಿಯಿಂದ ನನ್ನನ್ನೇ ಪಿಳಿಪಿಳಿ ನೋಡುತ್ತಿದ್ದಾಳೆ! ಅತ್ತ ಅವಳ ಟೀಚರ್ ಕೂಡ ನಮ್ಮಿಬ್ಬರನ್ನ ನೋಡಿ ನಗುತ್ತಿದ್ದಾರೆ. ನನಗೋ ಅವಮಾನದ ಜೊತೆಗೇ, ಅವಳೂ ಆ ಸ್ಪರ್ಧೆಗೇ ಹೋಗುವವಳು ಅಂತ ಖಾತ್ರಿಯಾಗಿ, ಅವಳನ್ನ ಪುನಃ ರಸ್ತೆ ದಾಟಿಸಬೇಕಾಗಿಲ್ಲವಲ್ಲ ಎಂಬ ವಿಚಿತ್ರ ಸಮಾಧಾನ!!! ಸ್ಪರ್ಧೆ ಮುಗಿಸಿ ವಾಪಸ್ ಬರಬೇಕಾದರೆ, ಪುನಃ ರಸ್ತೆ ದಾಟಬೇಕಾದಾಗ ಮಕ್ಕಳು ‘ಟೀಚರ್ ಟೀಚರ್, ಕೈ ಹಿಡ್ಕೊಳ್ಳಿ. ರಸ್ತೆ ದಾಟಬೇಕಲ್ಲ?!’ ಅಂತ ಗೋಳು ಹೊಯ್ಕೊಳ್ಳುತ್ತಿದ್ದರೆ, ಅದೇನೋ ಅಂತಾರಲ್ಲ, ‘ಭೂಮಿ ಬಾಯಿ ಬಿಡಬಾರದೇ ಅಂತ ಅನಿಸೋದು’ ಅಂತ. ಹಾಗೇ ಅನಿಸಿತು ನೋಡಿ.

ಹ್ಮ್. ಇಷ್ಟಾದ ಮೇಲೆ ಆ ಕೆಟ್ಟ ಅಭ್ಯಾಸ ಬಿಟ್ಟು ಹೋಗಿರಬಹುದು ಅಂತ ಅಂದುಕೊಂಡಿರೇನೋ.. ಖಂಡಿತ ಇಲ್ಲ ಬಿಡಿ. ಬದಲಿಗೆ ಕೈ ಹಿಡಿಯುವ ಮೊದಲು ಅವರ ಮುಖ ನೋಡುವ ಅಭ್ಯಾಸ ಮಾಡಿಕೊಂಡಿದ್ದೇನೆ!

ಇಂತಿಪ್ಪ ನಾನು ಬೆಂಗಳೂರೆಂಬ ಬೆಂಗಳೂರಿಗೆ ವಲಸೆ ಬರುವಾಗ ಮುಖ್ಯವಾಗಿ ಹೆದರಿದ್ದು ಇದೇ ವಿಷಯಕ್ಕೆ. ಇಲ್ಲಿನ ವಾಹನ ದಟ್ಟಣೆಯ ರಸ್ತೆಯಲ್ಲಿ ಯಾರ ಕೈಯೂ ಹಿಡಿಯದೆ ರಸ್ತೆ ದಾಟುವುದು ಹೇಗಪ್ಪಾ ಎಂಬ ಚಿಂತೆ ನನ್ನನ್ನು ಬಲವಾಗಿಯೇ ಕಾಡುತ್ತಿತ್ತು. ಆಮೇಲೆ ಇಲ್ಲಿನ ಕ್ರಾಸ್ ಓವರ್‍‍ಗಳನ್ನ, ಸಿಗ್ನಲ್‍ಗಳನ್ನ ನೋಡುವಾಗ ಕೊಂಚ ಸಮಾಧಾನವಾಯಿತು. ನನ್ನ ಕಾರ್ಯಕ್ಷೇತ್ರಕ್ಕೆ ಹೋಗುವಾಗ ಕ್ರಾಸ್‍ಓವರ್‍‍ನಲ್ಲೇ ಆರಾಮಾಗಿ ಹೋಗುತ್ತಿದ್ದೆ. ಯಾರ ಹಂಗೂ ಇಲ್ಲದಂತೆ, ಕಾಲಡಿ ಹೋಗುತ್ತಿರುವ ಎಲ್ಲ ವಾಹನಗಳನ್ನು ತುಚ್ಛವಾಗಿ ಕಾಣುತ್ತ ‘ನಾನೇ.... ರಾಜಕುಮಾರಿ’ ಅಂತ ಹಾಡುತ್ತ ಕ್ರಾಸ್‍ಓವರ್‍‍ನಲ್ಲಿ ನಡೆಯಬೇಕಾದರೆ ತುಂಬ ಹೆಮ್ಮೆ ಅನಿಸುತ್ತಿತ್ತು!

ಆದರೆ ಗ್ರಹಚಾರ ನೋಡಿ! ಒಬ್ಬಳೇ ಬರುತ್ತಿದ್ದವಳು ಅಂದೊಮ್ಮೆ ಹೊಸದಾಗಿ ಪರಿಚಿತಳಾದ ಗುಜರಾತಿ ಗೆಳತಿಯೊಂದಿಗೆ ಬರಬೇಕಾಯಿತು. ನಡೆಯುತ್ತಾ ಕ್ರಾಸ್ ಓವರ್ ಹತ್ತಿರ ಬಂದಾಗ ಅದನ್ನು ಹತ್ತಹೊರಟೆ. ನನ್ನನ್ನ ವಾಪಸು ಎಳೆದ ಅವಳು ‘ಹ್ಮ್? ಎಲ್ಲಿಗೆ’ ಅಂತ ಪ್ರಶ್ನಾರ್ಥಕವಾಗಿ ನನ್ನನ್ನ ನೋಡಿದಳು. ‘ರಸ್ತೆ ದಾಟಬೇಕಲ್ಲ?’ ಅಂದೆ. ಅದೇನು ಅಂದೆನೋ ಎಂಬಂತೆ ನನ್ನನ್ನ ಆಪಾದಮಸ್ತಕ ನೋಡಿದ ಹುಡುಗಿ ಪಕಪಕನೆ ನಗಲಾರಂಭಿಸಿದಳು. ‘ಅಲ್ಲ, ಇದೇನು ಮಹಾ ಟ್ರಾಫಿಕ್ ಅಂತ ಹೀಗೆ ಹೇಳ್ತಿದ್ದಿಯಾ? ಈಗ ಪೀಕ್ ಅವರ್ ಕೂಡ ಅಲ್ಲ. ಪಾಪ, ಅಷ್ಟು ಹೆದರ್ತೀಯಾ? ಬಾ ನಾನು ನಿನ್ನ ರಸ್ತೆ ದಾಟಿಸ್ತೀನಿ’ ಅನ್ನುತ್ತಾ, ನಾನು ‘ಅಲ್ಲ, ಭಯ ಏನೂ ಅಲ್ಲ’ ಅಂತ ಗೊಣಗುತ್ತಿದ್ದರೂ ಕೇಳದಂತೆ, ನನ್ನ ಅಭ್ಯಾಸ ಗೊತ್ತೇನೋ ಎಂಬಂತೆ ಕೈ ಹಿಡಿದುಕೊಂಡು ಕರಕೊಂಡು ಹೋದಳು. ಈಗ ದಿನವೂ ಅವಳೊಂದಿಗೇ ಹೋಗಿ ಬರುತ್ತಿದ್ದೇನೆ. ಅಲ್ಲಿಗೆ, ನನ್ನ ಕೈ ಹಿಡಿಯುವ ಅಭ್ಯಾಸ ಇಲ್ಲಿಯೂ ನಿರ್ವಿಘ್ನವಾಗಿ ಮುಂದುವರಿಯುತ್ತಿದೆ...

ಆದರೂ ನಿಜವಾಗಲೂ ನೀವೀಗ ಅಂದುಕೊಂಡಿರುವಂತೆ ನನಗೆ ರಸ್ತೆ ದಾಟುವಾಗ ಭಯವೇನೂ ಆಗುವುದಿಲ್ಲ. ನಂಬಿ!!

17 comments:

Jagali bhaagavata said...

ಶುಭದಾ,

ಚೆನ್ನಾಗಿದೆ ಲಘುಹರಟೆ. ಚೆನ್ನಾಗೇ ಬರೀತ್ಯಾ. ರಸ್ತೆ ದಾಟುವ ಕವನ ಅಂತ ಬರಿ. ಮೊದಲ್ನೇ ಕೆಲವು ಸಾಲು ನಾನೇ ಬರ್ಕೊಟ್ಟಿದೀನಿ

ಕರುಣಾಳು ಬಾ ಬೆಳಕೆ,
ಅಬ್ಬರದೀ ಟ್ರಾಫಿಕ್ಕಿನಲಿ,
ಕೈ ಹಿಡಿದು ನಡೆಸೆನ್ನನು :-)

Shubhada said...

ಹ್ಹ... ಧನ್ಯವಾದ ಭಾಗವತರೆ...

ನಿಜವಾಗಲೂ ನಿಮ್ಮ ಕವನ ತುಂಬ ಚೆನ್ನಾಗಿದೆ:-)

ಶುಭದಾ

ನಾವಡ said...

ಬ್ಲಾಗ್ ನ ಹೆಸರು ಚೆನ್ನಾಗಿದೆ. ನನಗೆ ಈ ಹೂ ಯಾವಾಗಲೂ ಇಷ್ಟ.
ನಿಮ್ಮ ಪೋಸ್ಟ್ ಗಳನ್ನು ಓದಿದೆ. ಖುಷಿಯಾಯಿತು. ನಿಮ್ಮ ಲಲಿತ ಶೈಲಿ ಮುದ ನೀಡಿತು. ಮುಂದುವರಿಸಿರಿ. ನಾವು ಓದಲು ಬರುತ್ತಿರುತ್ತೇವೆ.
ನಾವಡ

Unknown said...

ಚೆನ್ನಾಗಿದೆ ಬರಹ. ಸರಾಗವಾಗಿ ಓದಿಸಿಕೊಂಡು ಹೋಯಿತು. ಇನ್ನೂ ಬರೆಯಿರಿ.
`ಮಧು

Shubhada said...

ನಾವಡ ಅವರೆ,

ಹೌದು, ಆ ಹೂವು ನನಗೂ ತುಂಬ ಇಷ್ಟ, ಎಷ್ಟಂದರೂ ದೇವಪುಷ್ಪ ತಾನೆ!... ಧನ್ಯವಾದ. ಖಂಡಿತ ಬರೆಯುವ ಪ್ರಯತ್ನ ಮಾಡುವೆ.


ಮಧು ಅವರೆ,

ನಿಮ್ಮ ಹಾರೈಕೆಗೆ ತುಂಬ ಧನ್ಯವಾದ. ಖಂಡಿತ ಬರೆಯುವ ಪ್ರಯತ್ನ ಮಾಡುವೆ.

dinesh said...

Parijathada barahagalu chennagive

Sushrutha Dodderi said...

ಪ್ರಿಯರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ಪಯಣಿಗ said...

ನಿಮ್ಮ ಪಾರಿಜಾತ ಯಾವತ್ತೂ ಹೀಗೆ ಅರಳುತಿರಲಿ.....

ಸುಪ್ತದೀಪ್ತಿ suptadeepti said...

ಶುಭದಾ, ಹರಟೆ ಚೆನ್ನಾಗಿದೆ. ನಗುತ್ತಾ ನಗಿಸಿ ನಲಿಸಿತು.
ಧನ್ಯವಾದ. ಇನ್ನೂ ಬರಿ.

Shubhada said...

ತುಂಬ ಧನ್ಯವಾದಗಳು :-)

ವಿ.ರಾ.ಹೆ. said...

ನಮಸ್ತೆ.

ಭಾಗವತರು ಕರ್ಕೊಂಡು ಬಂದು ಬಿಟ್ಟಿದ್ದಾರೆ ಇಲ್ಲಿಗೆ. ಇನ್ನು ಪಾರಿಜಾತದ ಘಮ ಆನಂದಿಸಲು ನಾನೂ ರೆಡಿ ;)

ವಿಕ್ರಮ ಹತ್ವಾರ said...

Parijaatada haage nimma baravanige-araLuva jaavadali yaarigoo kaanisade belaku mooduttale bhoomi appirali.

Happy Blogging!!

Shubhada said...

ಹಾರೈಕೆಗೆ ತುಂಬ ಧನ್ಯವಾದಗಳು:-)

sunaath said...

ಪಟ್ಟಾಂಗದಿಂದ ’ಪಾರಿಜಾತ’ದ ಪರಿಚಯವಾಯಿತು. ಸೋಮಾರಿ ಭಾಗವತ ಮಾಡಿರೊ ಒಂದೇ ಒಳ್ಳೆ ಕೆಲಸ ಇದು.
ಚೆನ್ನಾಗಿ ಬರೆದಿದ್ದೀರಾ. ನಿಮ್ಮ ಪಾರಿಜಾತದ ಸುಗಂಧ ನಮಗೆ ಸಿಗುತ್ತ ಇರಲಿ.

chetana said...

Bhaagavatara sOmaaritanakke hats off.
Shubhada avare, chennagide nimma baraha. saraLavAgi, sahajavvagide.
blOg giri heege nadeyuttirali.
- Chetana Teerthahalli

Shubhada said...

ನಿಮ್ಮೆಲ್ಲರ ಹಾರೈಕೆಗೆ, ಪ್ರೋತ್ಸಾಹಕ್ಕೆ ತುಂಬ ತುಂಬ ಧನ್ಯವಾದಗಳು.

ಚೇತನ್ said...

Madamare tumba chennagide, barita iri...