Thursday, November 24, 2011

ಪುಟ್ಟ ಪುಟ್ಟ ಕತೆಗಳು

ತಿಂಗಳ ಹಿಂದಷ್ಟೇ ಅಜ್ಜನನ್ನ ಕಳೆದುಕೊಂಡ ಅಜ್ಜಿಯ ಬೋಳುಹಣೆ ನೋಡಲಾಗದೆ ಪುಟ್ಟ ಕಪ್ಪು ಸ್ಟಿಕ್ಕರ್ ಅವರ ಹಣೆಗಿಟ್ಟ ಮೊಮ್ಮಗಳು 'ಆಹಾ, ಈಗ ಚೆಂದ ಕಾಣ್ತಾರೆ ಅಜ್ಜಿ' ಎಂದು ಸಂಭ್ರಮಿಸುತ್ತಿರಬೇಕಾದರೆ ಅಜ್ಜಿಯ ಕಂಗಳಿಂದ ಜಾರುತ್ತಿದ್ದ ಹನಿಯೊಂದಕ್ಕೆ "ತಾನು ಹುಟ್ಟಿದ್ದೇಕೆ? ಪುಟ್ಟಿಯ ಖುಷಿ ಕಂಡ ಆನಂದಕ್ಕೋ ಅಥವಾ ಇನ್ನೆಂದೂ ಹಣೆ ತುಂಬ ದೊಡ್ಡ ಕುಂಕುಮ ಇಡಲಾಗದ ಅಜ್ಜಿಯ ದುಃಖಕ್ಕೋ?" ಅನ್ನೋ ಗೊಂದಲ.

**********

"ನನ್ಮಗ್ಳು ಹುಟ್ಟಿದ್ವರ್ಷ ಜೀವನ ನಡೆಸೋಕೆ ಕೈಲಿ ಮಚ್ಚು ಹಿಡೀಬೇಕಾಯ್ತು. ಈಗವಳಿಗೆ ಹತ್ನೇ ಕ್ಲಾಸು ಓದಿಸ್ತಿದ್ದೀನಿ" - ರಸ್ತೆಬದಿಯಲ್ಲಿ ಎಳನೀರು ಮಾರುವ ಹೆಂಗಸು ಹೆಮ್ಮೆಯಿಂದ ಹೇಳಿದ್ದು "ಕೈ ಜೋಪಾನಾಮ್ಮ" ಅಂತ ಕಾಳಜಿ ತೋರಿದ ತಾತಪ್ಪನಿಗೆ.

**********

ಚಲಿಸುತ್ತಿದ್ದ ಕಾರಿನ ಬಾಗಿಲು ಅಚಾನಕ್ ಆಗಿ ಓಪನ್ ಆಗಿ ಸ್ಕೂಟರಲ್ಲಿ ಬರುತ್ತಿದ್ದ ಮಧ್ಯವಯಸ್ಕ ಗಂಡ ಹೆಂಡತಿಗೆ ಡಿಕ್ಕಿ ಹೊಡೆದ ಪರಿಣಾಮ ಹೆಂಡತಿ ಕೆಳಬಿದ್ದರು. ಮಂಡಿಗೆ ಪೆಟ್ಟಾಗಿ ಏಳಲಾಗದೆ ಬಿದ್ದಿದ್ದ ಹೆಂಡತಿಯನ್ನು ಎಬ್ಬಿಸ ಹೋದ ಗಂಡನನ್ನು ಬಿಡದೆ ತಡೆಯುತ್ತಾ ಆಕೆ ಕಾರಿನಲ್ಲಿದ್ದವರ ಬಳಿ ಕೂಗಿ ಅಂದಳು "ನನ್ನ ಗಂಡನ್ನ ನನ್ನ ಎತ್ತೋಕೆ ಬಿಡ್ಬೇಡಿ ಸಾರ್! ನೀವೇ ಯಾರಾದ್ರು ಬನ್ನಿ". ಕಾರಿನಲ್ಲಿದ್ದವರೆಲ್ಲ 'ಇದೇನಪ್ಪ ವರಸೆ! ಗಂಡ ಹೆಂಡತಿ ಜಗಳ ಮಾಡಿಕೊಂಡು ಬಂದಿದಾರೇನೋ' ಅಂದುಕೊಳ್ಳುತ್ತಿರುವಾಗಲೇ ಆಕೆ ಮತ್ತೆ ಅಂದಳು "ನಿಮ್ಮ ದಮ್ಮಯ್ಯ.. ನನ್ನ ಗಂಡನ್ನ ನನ್ನ ಎತ್ತೋಕೆ ಬಿಡ್ಬೇಡಿ ಸಾರ್.. ಆತ ಹಾರ್ಟ್ ಪೇಷೆಂಟ್!". ಈ ಮಾತು ಕೇಳಿದ್ದೇ ದಡಬಡನೆ ಕಾರಿಂದ ಇಳಿದು ಆ ಮಹಿಳೆಯನ್ನು ಎತ್ತ ಬಂದ ಸಿದ್ದುಗೆ ತನ್ನ ಹೊಸ ಸಂಗಾತಿ ನೆನಪಾಗಿ ಕಿವಿಯಲ್ಲಿ ಒಂದೇ ಹಾಡು ರಿಂಗಣಿಸುತ್ತಿತ್ತು ... 'ಆ..ದರ್ರು ಪ್ರೇಮಕ್ಕೆ ಮೈಲೇಜು ಕಮ್ಮಿ.. ಸೆಲ್.....ಫೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ....'

**********

"ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ನಿಷೇಧಾಜ್ಞೆ, ಶಾಲಾ ಕಾಲೇಜುಗಳಿಗೆ ರಜೆ, ಹಲವಾರು ಕಾರ್ಪೋರೇಟ್ ಕಂಪನಿಗಳಿಗೂ ಮುನ್ನೆಚ್ಚರಿಕಾ ಕ್ರಮವಾಗಿ ರಜೆ..." ಎಲ್ಲ ಟಿ.ವಿ. ಚಾನೆಲ್^ಗಳಲ್ಲೂ ಇದೇ ವರದಿಗಳನ್ನ ಕೇಳಿ ಗೊಣಗಿಕೊಂಡೆ, "ಎಲ್ಲ ಕಡೆ ರಜೆ ಕೊಟ್ರೂ ನಮ್ಮ ಕಂಪೆನಿಗೆ ಕೊಡೋದೇ ಇಲ್ಲ. ಏನಾದ್ರು ಗಲಾಟೆ ಆದ್ರೆ ಕೊಡ್ಬೋದೋ ಏನೋ!!"
ರಾಕ್ಷಸ ಬೇರೆಲ್ಲೋ, ಗಲಾಟೆಗಳಾಗುವಲ್ಲಿ ಮಾತ್ರ ಇರುವುದಲ್ಲ. ಸ್ವಾರ್ಥಕ್ಕೋಸ್ಕರ ಕೆಟ್ಟದ್ದನ್ನೇ ಅಪೇಕ್ಷಿಸುವ ನನ್ನಂಥವರ ಮನದೊಳಗೂ ಇದ್ದಾನಲ್ಲ.

**********

"ಚಟ್ನಿ ಖಾರ ಇದೆಯಾ ಪುಟ್ಟೀ?, ಸಕ್ಕರೆ ಹಾಕ್ಕೊಂಡು ತಿಂತೀಯಾ ಇಡ್ಲಿಗೆ? ತರಿಸಲಾ?" ಅಪ್ಪ ಕೇಳಿದಾಗ, "ಅಯ್ಯೋ ಸ್ವಲ್ಪ ಸುಮ್ನಿರೀಪ್ಪ. ಏನೂ ಬೇಡ" ಅಂತ ರೇಗಿದ ಮಗಳು ಪಕ್ಕದಲ್ಲೇ ತನ್ನ ಪಾಡಿಗೆ ತಾನು ಇಡ್ಲಿ-ಚಟ್ನಿ ಮೆಲ್ಲುತ್ತಿದ್ದ ಗಂಡನನ್ನ ತಿವಿಯುತ್ತ, "ನಿಮಗೆ ನನ್ನ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ಮದ್ವೆ ಆಗಿ ಒಂದು ವರ್ಷ ಆದ್ರೂ, ನಮ್ಮಪ್ಪಂಗೆ ಗೊತ್ತಾಗೋ ಸೂಕ್ಷ್ಮ ನಿಮಗೆ ಗೊತ್ತಾಗಲ್ಲ?!" ಅಂದಳು. ಅವಳ ಬಡಪಾಯಿ ಗಂಡ, "ಅಬ್ಬಾ! ಜನ ಎಷ್ಟೊಂದು ಬಗೆಯಲ್ಲಿ ಪ್ರೀತಿ ತೋರಿಸುತ್ತಾರಪ್ಪಾ! ನಾನಿನ್ನೂ ಪ್ರೀತಿ ಮಾಡೋದರಲ್ಲಿ LKG-ಲಿ ಇದ್ದೀನೇನೋ" ಅಂತ ಮೆತ್ತಗೆ ಗೊಣಗಿಕೊಂಡ.

**********

ಸಣ್ಣ ಹಳ್ಳಿಯ ಪುಟ್ಟ ಅಂಗಡಿಯೊಂದರ ಮುಂದೆ ತನ್ನ ದೊಡ್ಡ ಕಾರು ನಿಲ್ಲಿಸಿದ ಸಿದ್ದು ಕಾರಿನೊಳಗಿದ್ದವರಿಗೆಲ್ಲ ಎಳನೀರು ಆರ್ಡರ್ ಮಾಡಿದ. ಅಂಗಡಿಯಾತ ತನ್ನ ಹೆಂಡತಿಯ ಬಳಿ ಆ ಮೊದಲೇ ಬಂದಿದ್ದ ಗಿರಾಕಿಗೆ ಸಾಮಾನು ಕೊಡಲು ಹೇಳಿ ಹೊರಬಂದು ಎಳನೀರು ಕೆತ್ತಿ ಕೊಡುವುದರಲ್ಲಿ ಮಗ್ನನಾದ. ಎಲ್ಲ ಮುಗಿಸಿ ಮತ್ತೆ ಅಂಗಡಿಯೊಳಕ್ಕೆ ಹೋದಾಗ ಹೆಂಡತಿ ದುಡ್ಡು ಕೊಟ್ಟು ಹೋದ ಗಿರಾಕಿಯ ಲೆಕ್ಕ ಒಪ್ಪಿಸಿದಳು. "ಅಯ್ಯೋ 10 kg ಅಕ್ಕಿಯ ಹಣ ತಗೊಂಡೇ ಇಲ್ಲವಲ್ಲ!?" ಎಂದು ಸಿಟ್ಟಿಂದ ಬೈದ ಗಂಡ ಆ ಗಿರಾಕಿ ಸಿಗುತ್ತಾನೇನೋ ನೋಡಲು ಓಡೋಡಿ ಹೊರ ಬಂದ. ಆ ಗಡಿಬಿಡಿಯಲ್ಲಿ ಅಲ್ಲೇ ಕಾಲ್ಬುಡದಲ್ಲಿ ಆಡುತ್ತಿದ್ದ ತನ್ನ ಸಣ್ಣ ಮಗನ ಪುಸ್ತಕ ಬೀಳಿಸಿದ್ದನ್ನು ಅವ ಗಮನಿಸಲಿಲ್ಲ. ಸೋತ ಮುಖ ಮಾಡಿಕೊಂಡು ವಾಪಸು ಬಂದವನ ಬಳಿ ಆ ಮಗು "ನನ್ನ ಪುಸ್ತ್ಕ ಬೀಳಿಸಿದ್ಯಾಕೆ ನೀನು?" ಅಂತ ಅಳುಮುಖ ಮಾಡಿತು. ಅದನ್ನು ಲೆಕ್ಕಿಸದೆ "ಅವನ್ನ ಕಳಿಸೋಕೆ ಮುಂಚೆ ನನ್ನತ್ರ ಕೇಳೋಕೆ ಆಗ್ಲಿಲ್ವಾ ನಿಂಗೆ?" ಅಂತ ಹೆಂಡತಿಗೆ ಗದರುತ್ತ ಒಳ ಬಂದವನ ಮುಂದೆ ಸಿದ್ದು 1000 ರೂಪಾಯಿಯ ನೋಟು ಹಿಡಿದ. ಮಗು ಮತ್ತೂ ಬಿಡದೆ ಅವನ ಹಿಂದೆಯೇ ಬಂದು "ನನ್ನ ಪುಸ್ತ್ಕ ಯಾಕೆ ಬೀಳಿಸಿದಿ ನೀನು ಹೇಳು.. ಹೇಳು... ಹೇಳೂ... " ಅನ್ನುತ್ತಾ ಅಪ್ಪನಿಗೆ ತನ್ನ ಪುಟ್ಟ ಕೈಗಳಿಂದ ಹೊಡೆಯಲು ಮುಂದಾಯ್ತು. ಈ ಎಲ್ಲ ನಾಟಕ ನೋಡುತ್ತಿದ್ದ ಸಿದ್ದು, ಸುಮಾರು 250 ರೂಪಾಯಿ ಪಂಗನಾಮ ಹಾಕಿ ಹೋದ ಗಿರಾಕಿಯ ಮೇಲಿನ ಸಿಟ್ಟು, ಹೆಂಡತಿಯ ಮೇಲಿನ ಸಿಟ್ಟು, ಅಂಗಡಿಗೆ ಬಂದ ಬೇರೆ ಗಿರಾಕಿಗಳ ಪುಕ್ಕಟೆ ಸಜೆಷನ್, ಇದರ ಜೊತೆಗೆ ತಾನು ಕೊಟ್ಟ ದೊಡ್ಡ ನೋಟಿಗೆ ಚಿಲ್ಲರೆ ಹುಡುಕಬೇಕಾದ ಟೆನ್ಷನ್ ಎಲ್ಲ ಸೇರಿಕೊಂಡು ಅಂಗಡಿಯಾತ ರಗಳೆ ಮಾಡುತ್ತಿರುವ ಮಗನಿಗೆ ಧರ್ಮದೇಟು ನೀಡೋದು ಗ್ಯಾರಂಟಿ ಅಂದುಕೊಂಡು ಮೀಸೆಯಡಿ ಮುಸಿ ನಗೋಕೆ ಶುರು ಮಾಡಿದ. ಆದರೆ ಅವನ ನಿರೀಕ್ಷೆ ಹುಸಿಯಾಗುವಂತೆ ಅಂಗಡಿಯಾತ ಪರಮ ತಾಳ್ಮೆಯಿಂದ "ನಾನು ನೋಡ್ಲಿಲ್ಲ ಪುಟ್ಟಾ ಸಾರಿ" ಅಂದಿದ್ದು ಕೇಳಿ ಸಿದ್ದುವಿನ ಕಣ್ಣು ಅರಿವಿಲ್ಲದೆ ಹನಿಗೂಡಿತು.

**********