Sunday, March 23, 2008

ಯಶಸ್ವೀ ಪುರುಷನ ವೃತ್ತಾಂತ

ಮೊನ್ನೆ ಸಂಜೆ ಬೆಂಗಳೂರಲ್ಲಿ ‘ಧೋ’ ಅಂತ ಜೋರು ಮಳೆ! ‘ಇದೇನಪ್ಪಾ, ಮಾರ್ಚಲ್ಲೇ ಮಳೆ? ಆಯ್ತು, ಇನ್ನು ಬೆಂಗಳೂರಲ್ಲಿ ಪ್ರವಾಹ ಶುರು!’ ಅಂತ ಅಂದುಕೊಳ್ಳುತ್ತಿರಬೇಕಾದರೆ BESCOMನವರೂ ಕೈಕೊಟ್ಟರು. ಬೆಂಗಳೂರಲ್ಲಿ ಕರೆಂಟ್ ಹೋದರೆ (ಅದೂ ಮಳೆ ಬರುತ್ತಿರಬೇಕಾದರೆ!) ಭಯಂಕರ ಬೋರಾಗುತ್ತದಾದ್ದರಿಂದ ಮಳೇಲಿ ಯಾರಿಗೂ ಕೇಳಿಸದು ಅಂತ ಧೈರ್ಯದಲ್ಲಿ ಸ್ವಲ್ಪ ಗಟ್ಟಿಯಾಗೇ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ...’ ಅಂತ ಆರ್ತನಾದ ಮಾಡುತ್ತಿದ್ದೆ! ನನ್ನ ಅರಚಾಟ ಪಕ್ಕದ ಮನೆಯವರಿಗಾಗಲೀ, BESCOMನವರಿಗಾಗಲೀ ಕೇಳಿಸಿತೋ ಇಲ್ಲವೋ, ಆದರೆ ಭಗವಂತ ಮಾತ್ರ ಕೇಳಿಯೇ ಕೇಳಿದ. ದೀನಳ ಮೊರೆಯನ್ನು ಆಲಿಸಿದಂತವನಾಗಿ ಮಿಂಚಿನ ರೂಪದಲ್ಲಿ ಬೆಳಕನ್ನೂ, ಗುಡುಗಿನ ರೂಪದಲ್ಲಿ ನನ್ನ ಹಾಡಿಗೆ ಸಾಥಿಯನ್ನೂ ದಯಪಾಲಿಸುವಂತವನಾದ! ವಿಷಯ ಇದಲ್ಲ, ಆ ಹಾಡಿನ ಪ್ರಭಾವವೋ, ಅಥವಾ ಭಗವಂತನ ದಯೆಯೋ, ಅಂತೂ ಆ ಕತ್ತಲಲ್ಲಿ ನನಗೆ ಯಾವತ್ತೋ ಓದಿದ ಲೇಖನವೊಂದರಲ್ಲಿದ್ದ ‘ಯಶಸ್ವೀ ಪುರುಷನ ವೃತ್ತಾಂತ’ ಥಟ್ಟಂತ ಫ್ಲಾಷ್ ಆಯ್ತು, ಥೇಟ್ ಆಗಸದಲ್ಲಿ ಮಿಂಚಾದಂತೆ.

ಅವನ ಕಥೆ ಹೇಳುವ ಮೊದಲು, ನನ್ನ ಅದ್ಭುತ ಸ್ಮರಣಶಕ್ತಿಯ ಬಗ್ಗೆ ನಿಮಗೆ ಹೇಳಿಬಿಡುವುದು ವಾಸಿ. ನಾನು ಸಿಕ್ಕಾಪಟ್ಟೆ ಓದುತ್ತೇನಾದರೂ ಅದೆಲ್ಲ ಬಹುಷ: ನನ್ನ ಕ್ಯಾಶ್ ಮೆಮೊರಿ ಎಂಬ ಟೆಂಪರರಿ ಸ್ಮರಣ ಕೋಶದಲ್ಲಿ ಮಾತ್ರ ಸೇವ್ ಆಗುತ್ತದಾದ್ದರಿಂದ, ಸಿಕ್ಕಾಪಟ್ಟೆ ವೇಗದಲ್ಲಿ ಅದನ್ನ ಮರೆತೂಬಿಡುತ್ತೇನೆ. ಹಾಗಾಗಿ ಆ ಲೇಖನದ ಪೂರ್ತಿ ವಿವರಗಳನ್ನು ಕೊಡಲಾರೆ. ಆ ಲೇಖನ ಬರೆದವರಾರು, ಯಾವ ವಿಷಯವಾಗಿ ಬರೆಯುತ್ತಾ ಈ ವೃತ್ತಾಂತವನ್ನು ಉಲ್ಲೇಖಿಸಿದರು ಎಂಬಿತ್ಯಾದಿ ವಿವರಗಳು ನನಗೆ ಸ್ವಲ್ಪವೂ ನೆನಪಿಲ್ಲ. ಹೋಗಲಿ ಎಂದರೆ, ಆ ಯಶಸ್ವಿ ಪುರುಷನ ಕಥೆಯೂ ಪೂರ್ತಿಯಾಗಿ ನೆನಪಾಗುತ್ತಿಲ್ಲ. ಹಾಗಾಗಿ ಸಾರಾಂಶವನ್ನಷ್ಟೇ ಇಲ್ಲಿ ಕೊಡಬಲ್ಲೆ. ನೀವೂ ಓದಿರಬಹುದು, ಆ ಲೇಖನವನ್ನ. ಪ್ರಾಯಶಃ ೫-೬ (ತೀರ ಹೆಚ್ಚೆಂದರೆ ೭-೮) ವರ್ಷಗಳ ಹಿಂದೆ ಉದಯವಾಣಿಯಲ್ಲಿ ಪ್ರಕಟವಾದ ಲೇಖನ ಪ್ರಾಯಶಃ ಅದು. (ಅಗೈನ್, ನನ್ನ ನೆನಪಿನ ಬಗ್ಗೆ ಯಾವ ಭರವಸೆ ಕೊಡಲಾರೆ!). ನಿಮಗೆ ನೆನಪಿದ್ದಲ್ಲಿ, ಅಥವಾ ಬರೆದವರೇ ನೀವಾಗಿದ್ದಲ್ಲಿ ದಯವಿಟ್ಟು ನನ್ನ ಉದ್ಧಟತನವನ್ನು ಮನ್ನಿಸಿ ಆ ಲೇಖನದ ವಿವರಗಳನ್ನು ನನ್ನ ಜೊತೆಗೂ ಹಂಚಿಕೊಳ್ಳಿ. ಆ ವೃತ್ತಾಂತದ ಸಾರಾಂಶ ಹೀಗಿದೆ:

ಆತ ಚಿಕ್ಕ ವಯಸ್ಸಿನಲ್ಲೇ ಹಲವಾರು ಅಪ್ರತಿಮ ಸಾಧನೆಗಳನ್ನು ಮಾಡಿದ ಪ್ರತಿಭಾವಂತ (ಇಷ್ಟೆಲ್ಲ ಮರೆತಿರೋಳು ಇನ್ನು ಅವ್ನ ಹೆಸರನ್ನ ನೆನಪಿಟ್ಕೊಂಡಿರ್ತೀನಾ? ;-)). ಅವನ ಸಾಧನೆಗಳಿಗಾಗಿ ಅವನನ್ನು ಗೌರವಿಸುತ್ತಾ ಅವನ ಸಾಧನೆಗಳ ಹಿಂದಿನ ಸ್ಫೂರ್ತಿಯ ಸೆಲೆ ಯಾವುದು ಅಂತ ಕೇಳಿದಾಗ ಆತ ತನ್ನ ಅಜ್ಜಿಯ ಕುರಿತು ಹೇಳುತ್ತಾನೆ. ಬಾಲ್ಯದಲ್ಲಿ ಆತ ಇಳಿವಯಸ್ಸಿನ ತನ್ನ ಅಜ್ಜಿ ಅಲವತ್ತುಕೊಳ್ಳುವುದನ್ನು ಕೇಳುತ್ತಾನೆ. ‘ನನ್ನ ಹರೆಯದಲ್ಲಿ ನಾನು ಏನೇನೋ ಕನಸುಗಳನ್ನ ಕಂಡಿದ್ದೆ. ಹಲವಾರು ಆಸೆಗಳನ್ನ, ಗುರಿಗಳನ್ನ ಸಾಧಿಸಬೇಕೆಂದುಕೊಂಡಿದ್ದೆ. ಆದರೆ ಸಮಯದ ಕಾರಣದಿಂದಲೋ, ಆರ್ಥಿಕ ಕಾರಣಗಳಿಂದಲೋ, ಅಥವಾ ಉದಾಸೀನತೆಯಿಂದಲೋ ಎಲ್ಲವನ್ನೂ ಮುಂದೂಡುತ್ತಾ ಬಂದೆ. ಈಗ ನನ್ನಲ್ಲಿ ಸಮಯ, ಹಣ, ಆಸೆ ಎಲ್ಲವೂ ಇದೆ. ಆದರೆ ಅದನ್ನೆಲ್ಲ ಸಾಧಿಸುವ ಶಕ್ತಿಯಾಗಲೀ, ಉತ್ಸಾಹವಾಗಲೀ ಇಲ್ಲ. ಅವನ್ನು ಸಾಧಿಸಲಾಗಲಿಲ್ಲವೆಂಬ ಕೊರಗು ಮಾತ್ರ ಇದೆ’. ಅಜ್ಜಿಯ ಈ ದುಃಖವನ್ನು ಮನಗಂಡ ಹುಡುಗ ಆ ಕ್ಷಣದಲ್ಲೇ ‘ತನ್ನ ಜೀವನದಲ್ಲಿ ಹೀಗಾಗಲು ಬಿಡಲಾರೆ’ ಎಂದು ನಿರ್ಧಾರ ಮಾಡುತ್ತಾನೆ. ತನ್ನ ಆಸೆಗಳು, ಗುರಿಗಳು ಏನೇನಿವೆಯೋ ಅವನ್ನೆಲ್ಲ ಪಟ್ಟಿ ಮಾಡಲಾರಂಭಿಸುತ್ತಾನೆ. ಸಣ್ಣ ಪುಟ್ಟ ಕೆಲವು ಆಸೆಗಳಿಂದ ಆರಂಭಗೊಂಡ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ದಿನವೂ ಆ ಪಟ್ಟಿಯನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಂಡದ್ದರಿಂದ ಹುಡುಗನಿಗೆ ಆ ಗುರಿಗಳನ್ನು ಸಾಧಿಸಲು ಅಗತ್ಯವಾದ ಯೋಜನೆಗಳನ್ನು ಪರಿಪೂರ್ಣವಾಗಿ ರೂಪಿಸಲು ಸಾಧ್ಯವಾಗುತ್ತದೆ. ಹುಡುಗ ಸಫಲನಾಗುತ್ತಾನೆ. ಹೇಳಲೇಬೇಕಾದ ವಿಷಯವೆಂದರೆ ಅವನ ಪಟ್ಟಿಯೇನೂ ತೀರ ಸರಳ ಆಸೆಗಳಿಂದ ಕೂಡಿದ್ದಾಗಿರಲಿಲ್ಲ. ಅತ್ಯಂತ ಕ್ಲಿಷ್ಟ, ಅಸಾಧ್ಯವೆನಿಸುವಂತ ಆಸೆಗಳೂ ಅದರಲ್ಲಿದ್ದುವು (ಉದಾಹರಣೆಗೆ, ಮೌಂಟ್ ಎವರೆಸ್ಟ್ ಏರುವುದು, ಪ್ರಪಂಚ ಪರ್ಯಟನ ಇತ್ಯಾದಿ). ಆದರೂ ತನ್ನ ಸಮಯ, ಸಂಪನ್ಮೂಲಗಳನ್ನು ಸದುಪಯೋಗ ಮಾಡಿದ್ದರಿಂದಾಗಿ ಅವನಿಗೆ ಚಿಕ್ಕ ವಯಸ್ಸಿನಲ್ಲೇ, ಕ್ಲಿಷ್ಟ ಗುರಿಗಳಲ್ಲೂ ಹಲವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಈ ಲೇಖನವನ್ನೋದಿದಾಗ ಎಷ್ಟು ಪ್ರಭಾವಿತಳಾಗಿದ್ದೆನೆಂದರೆ, ಲೇಖನವನ್ನು ಓದಿ ಮುಗಿಸಿದವಳೇ ನನ್ನದೊಂದು ಆಸೆಗಳ ಪಟ್ಟಿಯನ್ನು ಬರೆಯಲು ಪ್ರಾರಂಭಿಸಿದ್ದೆ. ಅದನ್ನು ಕೆಲ ದಿವಸಗಳ ಕಾಲ ಪ್ರತಿನಿತ್ಯ ಓದುತ್ತ, ಪಟ್ಟಿಯನ್ನು ಬೆಳೆಸುತ್ತ ಹೋಗಿದ್ದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ಅಭ್ಯಾಸ ನನಗೆ ಬಹಳ ಸಹಕಾರಿಯಾಗಿತ್ತು ಕೂಡ! ಆದರೆ ಆಮೇಲೆ ಅದೇನಾಯ್ತೋ, ಪ್ರಾಯಶಃ ಪರೀಕ್ಷಾ ಸಮಯದಲ್ಲಿ ಬುದ್ಧಿ ಡೈವರ್ಟ್(!) ಆಗುತ್ತದೆ ಅಂತಲೋ ಏನೋ ನಿಲ್ಲಿಸಿದ್ದು ಆಮೇಲೆ ಬಿಟ್ಟೇ ಹೋಯ್ತು. ಮತ್ತೆ ನೆನಪಾಗಿದ್ದು ಮೊನ್ನೆಯೇ! ಥ್ಯಾಂಕ್ಸ್ ಟು ಬೆಂಗಳೂರು ಮಳೆ! ನನ್ನಂತೆ ದಿನವಿಡೀ ಭಾರೀ ‘ಬಿಜಿ ’ ಎಂಬಂತೆ ಏನೂ ಮಾಡದೆ ಪೋಸು ಕೊಡುತ್ತಿರುವವರಿಗೆ ಇದೊಂದು ಅಭ್ಯಾಸ ಉಪಕಾರಿಯೇನೋ ಅನಿಸಿತು. ನನ್ನ ಇನ್ನೊಂದು ಪಟ್ಟಿಯನ್ನೂ ಬೆಳೆಸಬೇಕು. ಮತ್ತೆ ಊರಲ್ಲಿ ಅದೆಲ್ಲೋ ಅಟ್ಟದಲ್ಲಿ ಧೂಳು ತಿನ್ನುತ್ತಿರಬಹುದಾದ ನನ್ನ (ಹಳೆಯ) ಕನಸುಗಳನ್ನು ಹುಡುಕಿ ತೆಗೆದು ಜೀವ ತುಂಬಬೇಕು ಅಂದುಕೊಳ್ಳುವಷ್ಟರಲ್ಲಿ ಟ್ಯೂಬ್‍ಲೈಟ್ ಬೆಳಗಿತು! ಶುಭಸೂಚನೆ ಅನಿಸಿ ಖುಷಿಯಾಯ್ತು.

ಇವಿಷ್ಟು ನನ್ನ ಕತ್ತಲ ಯೋಚನೆ. ನನ್ನ ಯೋಜನೆ ಮರುದಿನವೇ ಕಾರ್ಯಗತವಾಗಿ, ನನ್ನ ಹೊಸ ಲಿಸ್ಟ್ ತಯಾರಾಗಿದ್ದರಿಂದಾಗಿ ಮತ್ತು ಆ ಲಿಸ್ಟಲ್ಲಿ ಈ ವಿಷಯದ ಬಗ್ಗೆ ಬ್ಲಾಗಲ್ಲಿ ಬರೆಯಬೇಕೆಂಬ ಆಸೆ ಮೊದಲಿದ್ದುದರಿಂದಾಗಿ ಈ ಬರಹ ನಿಮ್ಮ ಮುಂದಿದೆ. ನಿಮಗೆ ಇಷ್ಟವಾಗಿರದಿದ್ದಲ್ಲಿ, ಮಾರ್ಚಲ್ಲೇ ಅಚಾನಕ್ ಮುಖ ತೋರಿದ ಮಳೆಗೆ, ಮನೆ ಕತ್ತಲಾಗಿಸಿದ ಇಲಾಖೆಯವರಿಗೆ, ನನ್ನ ಪ್ರಾರ್ಥನೆಗೆ ಓಗೊಟ್ಟು ಬೆಂಗಳೂರಲ್ಲೂ ಅಪರೂಪಕ್ಕೆ ಆಗಮಿಸಿದ ಮಿಂಚು-ಗುಡುಗಿಗೆ(!) ಧಾರಾಳವಾಗಿ ಬೈದು ಬಿಡಿ. ನಾನಂತೂ ನಿರಪರಾಧಿ! :-)

ಬರೆಯುತ್ತಿರಬೇಕಾದರೆ ಮತ್ತೆ ಅನಿಸಿತು. ಅದು ಆ ಯಶಸ್ವಿ ಪುರುಷನ ಅಜ್ಜಿಯ ಬಗ್ಗೆ. ಆಕೆ ಅಷ್ಟು ಕೊರಗಬೇಕಾದ ಅಗತ್ಯವಿತ್ತೇ ಅಂತ ಅನಿಸುತ್ತಿದೆ. ವಯೋವೃದ್ಧರ ಮನಸ್ಥಿತಿಯ ಬಗ್ಗೆ ಕಲ್ಪಿಸಲೂ ನಮಗೆ ಅಸಾಧ್ಯ ಎಂಬುದು ವಾಸ್ತವವಾದರೂ, ನನ್ನ ದೊಡ್ಡಮ್ಮನ (ಅಪ್ಪನ ಅಮ್ಮ) ಬದುಕನ್ನು ನೋಡಿದ ನನಗೆ ಯಶಸ್ವೀ ಪುರುಷನ ಅಜ್ಜಿ ಅಷ್ಟು ದುಃಖಿಸಬೇಕಾದ್ದಿರಲಿಲ್ಲ ಅಂತ ತೀವ್ರವಾಗಿ ಅನಿಸಿತು. ೯೩ರ ಇಳಿಹರೆಯದ ನಮ್ಮ ದೊಡ್ಡಮ್ಮ ತುಂಬು ಜೀವನೋತ್ಸಾಹದ ಪ್ರತೀಕ. ಈಗಲೂ ತಮ್ಮಿಂದಾದಷ್ಟು ಕೆಲಸವನ್ನು ಮಾಡುತ್ತ, ಕನ್ನಡಕವಿಲ್ಲದೆ ಪುಸ್ತಕಗಳನ್ನು ಓದುತ್ತ, ಭಜನೆಗಳನ್ನು ಹಾಡುತ್ತ ತಮ್ಮ ದೈಹಿಕ ತೊಂದರೆಗಳನ್ನು ಮರೆಯುವ, ಸದಾ ಹಸನ್ಮುಖಿಯಾಗಿರುವ ದೊಡ್ಡಮ್ಮ ನಮಗೂ ಉತ್ಸಾಹ ತುಂಬುತ್ತಾರೆ. ಅವರ ನೆನಪಿನ ಭಂಡಾರದಿಂದ ಆಯ್ದ ಹಲವು ಸಾಂಪ್ರದಾಯಿಕ ಹಾಡುಗಳನ್ನು, ರಂಗೋಲಿಗಳನ್ನು ಸಂಗ್ರಹಿಸಿ ೨ ವರ್ಷಗಳ ಹಿಂದೆ ಪುಸ್ತಕ ರೂಪದಲ್ಲೂ ಪ್ರಕಟಿಸಲಾಯ್ತು. ಕೇವಲ ಬಾಯ್ದೆರೆಯಾಗಿ ಬಂದ ಆ ಹಾಡುಗಳನ್ನೆಲ್ಲ ಈಗಲೂ ನೆನಪಿಟ್ಟುಕೊಂಡಿರುವ ದೊಡ್ಡಮ್ಮನ ನೆನಪಿನ ಶಕ್ತಿ ನನ್ನದಕ್ಕಿಂತ ಎಷ್ಟೋ ವಾಸಿ ಅಂತ ಏನೂ ನಾಚಿಕೆಯಿಲ್ಲದೆ ಒಪ್ಪಿಕೊಂಡುಬಿಡುತ್ತೇನೆ! ಅವರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನ ನೆಂಪು.ಗುರು ಮುಂದೆ ತಮ್ಮ ಬ್ಲಾಗಲ್ಲಿ ನೀಡಲಿದ್ದಾರೆ. ಅವರನ್ನ ನೋಡಿದಾಗೆಲ್ಲ ವಯಸ್ಸಿನ ಭೇದವಿಲ್ಲದೆ, ತಮ್ಮಿಂದಾದಷ್ಟು ಸಾಧನೆಗಳನ್ನು ಯಾರು ಬೇಕಾದರೂ ತಮ್ಮ ತಮ್ಮ ಮಿತಿಯಲ್ಲೇ ಮಾಡಬಹುದು ಅಂತ ನನಗನಿಸುತ್ತದೆ. ಈ ಬಗ್ಗೆ ನಿಮಗೇನು ಅನಿಸಿತು?

15 comments:

Shrinidhi Hande said...

nimma blog chennagide..

sunaath said...

ನಿಮ್ಮ ನೆನಪಿನ ಶಕ್ತಿ ನಿಮಗೆ ಇದೇ ರೀತಿ ಯಾವಾಗಲೂ ಕೈಕೊಡುತ್ತಿರಲಿ ಹಾಗು ದೇವರ ದಯದಿಂದ (ಮಳೆ,ಗುಡುಗು
ಇತ್ಯಾದಿ)ಮತ್ತೆ ಸ್ಮರಣೆ ಬರುತ್ತಿರಲಿ ಅಂತ ಹಾರೈಸುತ್ತೇನೆ.
(ಅಂದರೆ ನಮಗೆ ಒಳ್ಳೆಯ ಲೇಖನಗಳು ಸಿಗಬಹುದು ಅಂತ!)

Shubhada said...

ಶ್ರೀನಿಧಿ,
ತುಂಬ ಧನ್ಯ್ವವಾದಗಳು.

ಸುನಾಥ್ ಸರ್,
ನಿಮ್ಮ ಹಾರೈಕೆ ಹೀಗೇ ಇರಲಿ...:-)

ಶುಭದಾ

Unknown said...

ಬಹಳ ಚೆನ್ನಾಗಿದೆ ನಿನ್ನ ಬರವಣಿಗೆಯ ಶೈಲಿ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ವಿಷಯಗಳೂ ಅಷ್ಟೇ interesting ಆಗಿವೆ. ನಿನ್ನ ಪಟ್ಟಿಯಲ್ಲಿ ಏನು, ಎಷ್ಟು, ಯಾವಾಗ, ಎಲ್ಲಿ ಸಾಧಿಸಬೇಕು ಅಂತ ಬರೆದುಕೊಂಡಿದ್ದಿಯೋ ಅದೇ ರೀತಿ ನಿನ್ನ ಸಾಧನೆ ಮುಂದುವರೆಯಲಿ ..

ಹರಿಪೂಜಾ.

Shubhada said...

ನಿಮ್ಮ ಹಾರೈಕೆಗೆ ತುಂಬ ಧನ್ಯವಾದ:-)

ನಾವಡ said...

ಶುಭದಾ ಅವರೇ,
ಚೆನ್ನಾಗಿದೆ ಈ ಲೇಖನ. ಆದರೆ ನಿಮ್ಮ ನೆನಪಿನ ಶಕ್ತಿಯ ಕೊರತೆಗೆ ಲೇಖನದಲ್ಲಿ ಮೂರ್ನಾಲ್ಕು ಬಾರಿ ಮನ್ನಿಸಿ, ಮನ್ನಿಸಿ ನಮ್ಗೆ ಸುಸ್ತಾಯಿತು..ಹ್ಹ..ಹ್ಹ..
ನಾವಡ

Manu said...

ಶುಭದಾ,
ನಿಮ್ಮ ಲೇಖನ ತುಂಬಾ ಹಿಡಿಸಿತು...
ಈ ಬ್ಲಾಗಾಯಣ ಹೀಗೆಮುಂದುವರಿಯಲಿ.

Shubhada said...

ಹ ಹ್ಹ... ಅಷ್ಟು ಬಾರಿ ಮನ್ನಿಸಿ ಸುಸ್ತಾಗಿದ್ದರೂ, ಕಮೆಂಟಿಸಿದ್ದಕ್ಕೆ ತುಂಬು ಧನ್ಯವಾದಗಳು ನಾವಡರೆ... :-)

ಮನು,
ಹಾರೈಕೆಗೆ ಧನ್ಯವಾದಗಳು... :-)

Ambica said...

Shubada avare,
nimma barahagalannu nirvignavagi munduvaresi.
Shubhaharaikegalu :)




Ambika

Unknown said...

Nimma baravanige manasige muda needithu



Pushpa

Ashwini Mayya said...

tumba chennagi barediddiya...
shubhada ninage shubhashayagalu.
naanu innu bengaloorinalli malegaagi kaayuttha irruthene!!!!
enu nenapagutto nodutthene!

DivyaChandu said...

Hi subbi, hege helodo nin lekanakke , sikkapatte bardidya...hage odiskondu hoitu..Nera matu ,artavathada padapunja,naijate ella ellanu nange tumba esta aithu.neene nan hatra eddu kate heldage ettu kano chinnu..hege barita eru

sritri said...

nimma kanasugala patti blognalli baruvudannu kaayuttiddene. tumba upayukta anisitu ee salahe.

vijay said...

artical is very nice pl give me your no my no 9880334122

vijay said...

very nice pl give me ur no 9880334122